ರಾಜಕೀಯಕ್ಕಾಗಿ ಸೇನೆಯ ಹೆಸರು ಬಳಕೆ ಬಗ್ಗೆ ರಾಷ್ಟ್ರಪತಿಗೆ ಪತ್ರ ಬರೆದದ್ದು ನಿಜ
ಜ. ಚೌಧರಿ, ಮೇ. ಜ. ಕಕ್ಕರ್ ಸ್ಪಷ್ಟನೆ

ಹೊಸದಿಲ್ಲಿ, ಎ.12: ದೇಶದ ಸಶಸ್ತ್ರ ಪಡೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ 156 ನಿವೃತ್ತ ಸೇನಾಧಿಕಾರಿಗಳು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ ಎಂಬ ವರದಿ ಭಾರೀ ಚರ್ಚೆಗೆ ಕಾರಣವಾಗಿದೆ. ವರದಿಯನ್ನು ರಾಷ್ಟ್ರಪತಿ ಭವನ ಹಾಗೂ ಕೆಲವು ಹಿರಿಯ ನಿವೃತ್ತ ಸೇನಾಧಿಕಾರಿಗಳು ನಿರಾಕರಿಸಿದ್ದಾರೆ. ಆದರೆ ನಿವೃತ್ತ ಜನರಲ್ ಶಂಕರ್‌ರಾಯ್ ಚೌಧರಿ ಹಾಗೂ ಮೇಜರ್ ಜನರಲ್ ಹರ್ಷ ಕಕ್ಕರ್ ಪತ್ರ ಬರೆದಿರುವುದನ್ನು ದೃಢಪಡಿಸಿದ್ದಾರೆ.
ಮಿಲಿಟರಿ ಕಾರ್ಯಾಚರಣೆಗಳ ಶ್ರೇಯವನ್ನು ರಾಜಕಾರಣಿಗಳು ಪಡೆಯುತ್ತಿರುವುದಕ್ಕೆ, ಪಕ್ಷಗಳ ಕಾರ್ಯಕರ್ತರು ಸೇನಾ ಸಮವಸ್ತ್ರ ಧರಿಸಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವುದು, ರಾಜಕೀಯ ಪಕ್ಷಗಳ ಪೋಸ್ಟರ್‌ಗಳಲ್ಲಿ ಸೇನಾ ಯೋಧರ, ಅದರಲ್ಲೂ ವಿಶೇಷವಾಗಿ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಫೋಟೋ ಹಾಕುತ್ತಿರುವುದನ್ನು ಆಕ್ಷೇಪಿಸಿ ಸೇನಾಪಡೆಯ ನಿವೃತ್ತ ಅಧಿಕಾರಿಗಳು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿತ್ತು. ಗಡಿ ದಾಟಿ ನಡೆಸುವ
ಮಿಲಿಟರಿ ಕಾರ್ಯಾಚರಣೆಯ ಶ್ರೇಯವನ್ನು ಪಡೆದುಕೊಳ್ಳಲು ರಾಜಕೀಯ ಪಕ್ಷಗಳು ನಡೆಸುತ್ತಿರುವ ಅಸಹಜ ಮತ್ತು ಅಸ್ವೀಕಾರಾರ್ಹ ನಡೆಯನ್ನು ಹಾಗೂ ಭಾರತೀಯ ಸೇನೆಯನ್ನು ‘ಮೋದಿಯ ಸೇನೆ’ ಎಂದು ಬಣ್ಣಿಸುತ್ತಿರುವ ಬಗ್ಗೆ ನಿವೃತ್ತ ಅಧಿಕಾರಿಗಳು ಪತ್ರದಲ್ಲಿ ಆತಂಕ ತೋಡಿಕೊಂಡಿದ್ದು ಸೇನೆಯ ಮಹಾದಂಡನಾಯಕರಾಗಿರುವ ರಾಷ್ಟ್ರಪತಿಗಳು ಇದನ್ನು ಗಮನಿಸಿ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ ಎನ್ನಲಾಗಿದೆ.
ಈ ವರದಿ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ ರಾಷ್ಟ್ರಪತಿ ಭವನದ ಮೂಲಗಳು, ಈ ರೀತಿಯ ಯಾವುದೇ ಪತ್ರ ಬಂದಿಲ್ಲ ಎಂದಿದ್ದಾರೆ. ಪತ್ರದ ವಿಷಯ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಹಿರಿಯ ಸೇನಾಧಿಕಾರಿಗಳು, ಪತ್ರದ ಬಗ್ಗೆ ತಮಗೇನೂ ತಿಳಿದಿಲ್ಲ. ಇದೊಂದು ಸುಳ್ಳುಸುದ್ದಿ ಎಂದಿದ್ದಾರೆ.
ಈ ಮಧ್ಯೆ ಹೇಳಿಕೆ ನೀಡಿರುವ ವಾಯುಪಡೆಯ ಮಾಜಿ ಮುಖ್ಯಸ್ಥ ಎನ್‌ಸಿ ಸೂರಿ, ರಾಷ್ಟ್ರಪತಿಗೆ ಪತ್ರ ಬರೆದಿರುವುದು ಅಡ್ಮಿರಲ್ ಎಲ್.ರಾಮದಾಸ್ ಅಲ್ಲ. ಮೇಜರ್ ಚೌಧರಿ ಎಂಬವರು ಪತ್ರ ಬರೆದಿದ್ದು ಇದು ವಾಟ್ಸಾಪ್ ಹಾಗೂ ಇ-ಮೇಲ್‌ಗಳಲ್ಲಿ ಪ್ರಸಾರವಾಗಿದೆ ಎಂದಿದ್ದಾರೆ.
ಸಶಸ್ತ್ರ ಪಡೆಗಳು ರಾಜಕೀಯದಿಂದ ದೂರವಿದ್ದು ರಾಜಕೀಯವಾಗಿ ಆಯ್ಕೆಯಾದ ಸರಕಾರವನ್ನು ಬೆಂಬಲಿಸುತ್ತವೆ ಎಂದು ತಾನು ಬರೆದಿರುವುದಾಗಿ ವರದಿಯಾಗಿದೆ. ಆದರೆ ಇದು ಸುಳ್ಳು. ಇಂತಹ ಪತ್ರಗಳಿಗೆ ನನ್ನ ಒಪ್ಪಿಗೆಯನ್ನು ಯಾರೂ ಕೇಳಿಲ್ಲ. ಪತ್ರದಲ್ಲಿ ಬರೆದಿದೆ ಎನ್ನಲಾಗಿರುವ ವಿಷಯ ತನ್ನ ಅಭಿಪ್ರಾಯವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ಕರ್ತವ್ಯದಲ್ಲಿರುವ ನಾವು ಸರಕಾರದ ಆದೇಶವನ್ನು ಪಾಲಿಸಬೇಕು. ನಾವು ರಾಜಕೀಯೇತರ ವ್ಯಕ್ತಿಗಳು. ಕೆಲವರು ಏನೋ ಒಂದನ್ನು ಹೇಳಿ ಸುಳ್ಳುಸುದ್ದಿ ಹಬ್ಬಿಸಿ ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಇಂತಹ ಪತ್ರ ಬರೆದಿರುವ ಮಹಾನುಭಾವ ಯಾರೆಂಬುದೇ ತನಗೆ ತಿಳಿದಿಲ್ಲ’ ಎಂದು ಪತ್ರಕ್ಕೆ ಸಹಿ ಹಾಕಿದವರಲ್ಲಿ ಮೊದಲಿಗರು ಎಂದು ಹೇಳಲಾದ ಜ ಎಸ್‌ಎಫ್ ರಾಡ್ರಿಗಸ್ ಪ್ರತಿಕ್ರಿಯಿಸಿದ್ದಾರೆ. ಸೇನಾಪಡೆಯ ಮಾಜಿ ಉಪಮುಖ್ಯಸ್ಥ ಲೆಜ ಎಂಎಲ್ ನಾಯ್ಡು ಅವರೂ ತಾನು ಪತ್ರಕ್ಕೆ ಸಹಿ ಹಾಕಿಲ್ಲ ಎಂದು ತಿಳಿಸಿದ್ದಾರೆ.
ಆದರೆ ತಾನು ಪತ್ರಕ್ಕೆ ಸಹಿ ಹಾಕಿರುವುದಾಗಿ ಮೇಜರ್ ಜನರಲ್ ಹರ್ಷ ಕಕ್ಕರ್ ಸ್ಪಷ್ಟಪಡಿಸಿದ್ದಾರೆ. ಈ ಪತ್ರದಲ್ಲಿರುವ ವಿಷಯ ಮನದಟ್ಟಾದ ಬಳಿಕವಷ್ಟೇ ತಾನು ಪತ್ರಕ್ಕೆ ಸಹಿ ಹಾಕಿರುವುದಾಗಿ ಅವರು ಹೇಳಿದ್ದಾರೆ. ಪತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿರುವ 156 ನಿವೃತ್ತ ಅಧಿಕಾರಿಗಳಲ್ಲಿ - ಜ ಎಸ್‌ಎಫ್ ರಾಡ್ರಿಗಸ್, ಶಂಕರ್ ರಾಯ್ ಚೌಧರಿ, ದೀಪಕ್ ಕಪೂರ್, ಅಡ್ಮಿರಲ್ ಎಲ್. ರಾಮದಾಸ್, ವಿಷ್ಣು ಭಾಗವತ್, ಅರುಣ್ ಪ್ರಕಾಶ್, ಸುರೇಶ್ ಮೆಹ್ತ ಹಾಗೂ ಏರ್‌ಚೀಫ್ ಮಾರ್ಷಲ್ ಎನ್‌ಸಿ ಸೂರಿ- ಈ 8 ನಿವೃತ್ತ ಸೇನಾ ಮುಖ್ಯಸ್ಥರು ಸೇರಿದ್ದಾರೆ ಎನ್ನಲಾಗಿದೆ.
ಸೇನಾಧಿಕಾರಿಗಳ ಪತ್ರದ ಕುರಿತ ವರದಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷ, ಯೋಧರನ್ನು ಮತಗಳಿಕೆಗಾಗಿ ಮೋದಿ ಬಳಸಬಹುದು. ಆದರೆ ಯೋಧರು ಬಿಜೆಪಿಯೊಂದಿಗಿಲ್ಲ ಮತ್ತು ಭಾರತದೊಂದಿಗೆ ಇದ್ದಾರೆ ಎನ್ನುವುದು ಸ್ಪಷ್ಟವಾಗಿದೆ. 8 ನಿವೃತ್ತ ಮುಖ್ಯಸ್ಥರ ಸಹಿತ 156 ಅಧಿಕಾರಿಗಳು ಯೋಧರನ್ನು ಮತಗಳಿಕೆಗಾಗಿ ಬಳಸಿಕೊಳ್ಳುತ್ತಿರುವ ಮೋದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ ಎಂದು ತನ್ನ ಅಧಿಕೃತ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದೆ.
ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಇದು ಖಂಡನೀಯವಾಗಿದೆ. ಇಬ್ಬರು ಹಿರಿಯ ಅಧಿಕಾರಿಗಳು ತಾವು ಒಪ್ಪಿಗೆ ನೀಡಿಲ್ಲ ಎಂದಿದ್ದಾರೆ. ಕೆಲವು ಸ್ಥಾಪಿತ ಹಿತಾಸಕ್ತಿಗಳು ಈಗ ಸುಳ್ಳು ಪತ್ರಗಳನ್ನು ಬಳಸುತ್ತಿರುವುದು ಆತಂಕಕಾರಿಯಾಗಿದೆ ಎಂದವರು ಹೇಳಿದ್ದಾರೆ. ನಾವು ರಾಜಕೀಯದಿಂದ ದೂರ ಇರುವವರು. ಯಾವುದೇ ಸರಕಾರವಿರಲಿ, ಅದಕ್ಕೆ ನಾವು ಉತ್ತರದಾಯಿಗಳಾಗಿದ್ದೇವೆ. ರಕ್ಷಣಾ ಪಡೆಗಳ ಮೇಲೆ ಪ್ರಭಾವ ಬೀರಲು ನಾವು ಬಯಸುವುದಿಲ್ಲ. ಈ ಪತ್ರ ರಕ್ಷಣಾ ಪಡೆಗಳಿಗಲ್ಲ. ಇದು ದೇಶದ ರಾಜಕೀಯ ಮುಖಂಡ, ಸೇನಾಪಡೆಗಳ ಪ್ರಧಾನ ಕಮಾಂಡರ್ ಹಾಗೂ ಎಲ್ಲಾ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದೆ ಎಂದು ನಿವೃತ್ತ ಜನರಲ್ ಶಂಕರ್‌ರಾಯ್ ಚೌಧರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮೋದಿಯವರ ಸೇನೆ ಎಂದಿದ್ದ ಆದಿತ್ಯನಾಥ್
ಇತ್ತೀಚೆಗೆ ನಡೆದ ಚುನಾವಣಾ ರ್ಯಾಲಿಯೊಂದರಲ್ಲಿ, ಮಾತನಾಡಿದ್ದ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ಸಶಸ್ತ್ರ ಪಡೆಗಳನ್ನು ‘ಮೋದೀಜಿಯವರ ಸೇನೆ’ ಎಂದು ಉಲ್ಲೇಖಿಸಿರುವ ಬಗ್ಗೆಯೂ ರಾಷ್ಟ್ರಪತಿಗಳಿಗೆ ಬರೆದಿರುವ ಪತ್ರದಲ್ಲಿ ಕಳವಳ ಸೂಚಿಸಲಾಗಿದೆ ಎಂದು ವರದಿಯಾಗಿದೆ. ಆದಿತ್ಯನಾಥ್ ಹೇಳಿಕೆಗೆ ಚುನಾವಣಾ ಆಯೋಗ ಛೀಮಾರಿ ಹಾಕಿತ್ತು.







