ಮಹಿಳಾ ವಿರೋಧಿ ತೇಜಸ್ವಿ ಸೂರ್ಯನಿಗೆ ಮತ ಹಾಕಬೇಡಿ: ಕೆ.ಷರೀಫಾ

ಬೆಂಗಳೂರು, ಎ.12: ಸಂವಿಧಾನ ಹಾಗೂ ಮಹಿಳೆಯರ ಘನತೆಯನ್ನು ಕೀಳು ಮಟ್ಟದಲ್ಲಿ ಕಾಣುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯನಿಗೆ ಮತ ನೀಡಬೇಡಿ ಎಂದು ಆಗ್ರಹಿಸಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆ ಧರಣಿ ನಡೆಸಿದೆ.
ಶುಕ್ರವಾರ ನಗರದ ಬಸವನಗುಡಿಯ ರೋಟಿ ಘರ್ ಹೊಟೇಲ್ ಎದುರು ನೂರಾರು ಮಹಿಳಾ ಹೋರಾಟಗಾರ್ತಿಯರ ಜೊತೆ ಪಾಲ್ಗೊಂಡು ಪ್ರತಿಭಟನಾ ಧರಣಿಯನ್ನುದ್ದೇಶಿಸಿ ಮಾತನಾಡಿದ ಕೆ.ಶರೀಫಾ, ಸಂವಿಧಾನವೇ ದೇಶದ ಅಭಿವದ್ಧಿಯ ಅಡಿಗಲ್ಲಾಗಿದೆ. ಮಹಿಳೆಯರನ್ನು ಕೀಳಾಗಿ ಕಾಣುವವರು ದೇಶವನ್ನು ಮುನ್ನಡೆಸಲಾರರು. ಎಲ್ಲ ವರ್ಗದವರನ್ನೂ ಜೊತೆಗೆ ಕರೆದುಕೊಂಡು ಹೋಗುವವರೇ ಉತ್ತಮ ಜನಪ್ರತಿನಿಧಿಗಳು, ಈ ನಿಟ್ಟಿನಲ್ಲಿ ಮಹಿಳಾ ವಿರೋಧಿ ತೇಜಸ್ವಿ ಸೂರ್ಯನಿಗೆ ಮತ ನೀಡಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಮಹಿಳಾ ಮೀಸಲಾತಿ ವಾಸ್ತವವಾಗಿ ಜಾರಿಗೆ ಬಂದರೆ ಭಯ ಉಂಟಾಗುತ್ತದೆ ಎಂದು 2014ರಲ್ಲಿ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು. ಆದರೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ 24 ಗಂಟೆಯೊಳಗೆ ಹಳೆಯ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಆದರೆ, ಆ ಟ್ವೀಟ್ ನಮ್ಮ ಮನಸ್ಸಿನಿಂದ ತೆಗೆದು ಹಾಕಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತೇಜಸ್ವಿಯಂತಹ ಅಭ್ಯರ್ಥಿಯನ್ನು ತಿರಸ್ಕರಿಸುವುದು ಪ್ರಜಾತಾಂತ್ರಿಕ ವ್ಯವಸ್ಥೆಯ ಜವಾಬ್ದಾರಿಯಾಗಿದೆ. ಸಂವಿಧಾನವನ್ನು ಉಳಿಸುವುದರಿಂದ ಸಾಮಾನ್ಯ ಪ್ರಜೆಗಳ ಬದುಕನ್ನು ರಕ್ಷಿಸುವ ಮತ್ತು ಮಹಿಳೆಯರ ಘನತೆಯನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತದೆ. ಹೀಗಾಗಿ, ಎಚ್ಚರದಿಂದ ಮತ ಹಾಕೋಣ.
-ಕೆ.ಶರೀಫಾ, ಸಂವಿಧಾನ ಉಳಿವಿಗಾಗಿ ಕರ್ನಾಟಕದ ಸಂಚಾಲಕಿ
ಮಹಿಳೆಯರ ಘೋಷಣೆಗಳು
* ಕಪ್ಪು ಹಣ ತರುತ್ತೇವೆಂದು ಬೊಗಳೆ ಬಿಟ್ಟವರಿಗೆ ನಮ್ಮ ಮತ ಇಲ್ಲ.
* ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿದವರಿಗೆ ನಮ್ಮ ಮತ ಇಲ್ಲ.
* ಸಂವಿಧಾನ ವಿರೋಧಿಗಳಿಗೆ ನಮ್ಮ ಮತ ಇಲ್ಲ.
* ಸೈನ್ಯವನ್ನು ಓಟಿನ ರಾಜಕಾರಣಕ್ಕೆ ಬಳಸಿಕೊಂಡವರಿಗೆ ನಮ್ಮ ಮತ ಇಲ್ಲ.
* ಸರಕಾರಿ ವಿಶ್ವವಿದ್ಯಾಲಯಗಳನ್ನು ಮುಚ್ಚಿ, ಖಾಸಗಿ ವಿವಿಯನ್ನು ಹೆಚ್ಚಿಸಿದವರಿಗೆ ನಮ್ಮ ಮತ ಇಲ್ಲ.







