ಸಂವಿಧಾನದ ರಕ್ಷಣೆ, ಜಾತ್ಯತೀತ ವ್ಯವಸ್ಥೆ ಬಲಗೊಳ್ಳಲು ಪ್ರಮೋದ್ ಗೆಲುವು ಅನಿವಾರ್ಯ: ಎಂ.ಎ.ಗಫೂರ್

ಎಂ.ಎ.ಗಫೂರ್
ಉಡುಪಿ, ಎ.12: ದೇಶದ ಸಂವಿಧಾನ ರಕ್ಷಣೆ ಹಾಗೂ ಜಾತ್ಯತೀತ ವ್ಯವಸ್ಥೆ ಯನ್ನು ಬಲಪಡಿಸುವ ದೃಷ್ಠಿಯಲ್ಲಿ ಇಂದು ಉಡುಪಿ ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಪ್ರಮೋದ್ ಮಧ್ವರಾಜ್ ಅವರನ್ನು ಗೆಲ್ಲಿಸಬೇಕಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್ ಹೇಳಿದ್ದಾರೆ.
ಸಂಸತ್ನಲ್ಲಿ ಕೆಲಸ ಮಾಡುವ ಅನುಭವ ಮತ್ತು ದೂರದೃಷ್ಠಿ ಯುವಕರಾದ ಪ್ರಮೋದ್ ಮಧ್ವರಾಜ್ ಅವರಲ್ಲಿದ್ದು, ಇದೆಲ್ಲವೂ ಅವರ ಗೆಲುವಿಗೆ ಸಹಕಾರಿ ಯಾಗಲಿದೆ. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಮತ್ತು ಮುಸ್ಲಿಮ್ ಸಮುದಾಯ ಪ್ರಮೋದ್ ಮಧ್ವರಾಜ್ ಅವರ ಬೆಂಬಲಕ್ಕೆ ನಿಂತಿದೆ. ನಮ್ಮ ಮಧ್ಯೆ ಯಾವುದೇ ಗೊಂದಲಗಳಿಲ್ಲ. ಕೆಲವು ಕಡೆಗಳಲ್ಲಿದ್ದ ಗೊಂದಲಗಳನ್ನು ಈಗಾಗಲೇ ನಿವಾರಣೆ ಮಾಡಲಾಗಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಆಸ್ಕರ್ ಫೆರ್ನಾಂಡಿಸ್ ಮಾರ್ಗದರ್ಶನದಲ್ಲಿ ಮಾಜಿ ಶಾಸಕರು, ಬ್ಲಾಕ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಆಸಕ್ತಿಯಿಂದ ಮನೆ ಮನೆ ಭೇಟಿ ನೀಡಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೆಡಿಎಸ್ ವಿಧಾನ ಪರಿಷತ್ ಸದಸ್ಯರಾದ ಬೋಜೇಗೌಡ, ಧರ್ಮೆಗೌಡ ಮತ್ತು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಡಾ. ವಿಜಯ ಕುಮಾರ್, ಶೃಂಗೇರಿ ಶಾಸಕ ರಾಜೇಗೌಡರ ನೇತೃತ್ವದಲ್ಲಿ ಎರಡೂ ಪಕ್ಷಗಳ ಎಲ್ಲ ಪ್ರಮುಖರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ವ್ಯಕ್ತಿಯೊಬ್ಬರು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಈ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಇಡೀ ದೇಶದಲ್ಲೇ ಇತಿಹಾಸವಾಗಿದೆ. ಪ್ರಮೋದ್ ಮಧ್ವರಾಜ್ ಶಾಸಕರಾಗಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ, ಮೀನು ಗಾರಿಕಾ ಸಹಾಯಕ ಸಚಿವರಾಗಿ ಹಾಗೂ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ಮೀನುಗಾರ ಸಮುದಾಯದ ಒಟ್ಟು ಸಮಸ್ಯೆಗಳಿಗೆ ತನ್ನದೇ ರೀತಿಯಲ್ಲಿ ಸ್ಪಂದನೆಯನ್ನು ನೀಡಿದ್ದಾರೆ. ದ.ಕ. ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿಯೂ ಅವರು ಕರಾವಳಿ ಕರ್ನಾಟಕದ ಸೇವೆಯನ್ನು ಪ್ರಮಾಣಿಕವಾಗಿ ಮಾಡಿದ್ದಾರೆ ಎಂದು ಅವರು ಹೇಳಿದರು.
ಅಭ್ಯರ್ಥಿ ಕುರಿತ ಮುಸ್ಲಿಮ್ ಸಮುದಾಯದಲ್ಲಿದ್ದ ಎಲ್ಲ ಗೊಂದಲಗಳು ಪರಿಹಾರ ಕಂಡಿವೆ. ಜಿಲ್ಲಾ ಮುಸ್ಲಿಮ್ ಒಕ್ಕೂಟ, ಜಿಲ್ಲಾ ಸಂಯುಕ್ತ ಜಮಾಅತ್, ಸಮುದಾಯ ಇತರ ಸಂಘಟನೆಗಳನ್ನು ಪಕ್ಷದ ಪ್ರಮುಖರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ದೇಶದ ಹಿತದೃಷ್ಠಿಯಿಂದ ಹಾಗೂ ರಾಹುಲ್ ಗಾಂಧಿ ಯನ್ನು ಭವಿಷ್ಯದ ನಾಯಕರಾಗಿ ಕಾಣುವ ದೃಷ್ಠಿಯಲ್ಲಿ ಎಲ್ಲರು ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎಂದು ಎಂ.ಎ.ಗಫೂರ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.







