ಜೆಟ್ ಏರ್‌ವೇಸ್ ಬಿಕ್ಕಟ್ಟು: ತುರ್ತು ಸಭೆ ಕರೆದ ಪಿಎಂಒ

ಮುಂಬೈ, ಎ. 12: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಖಾಸಗಿ ವಿಮಾನ ಸಂಸ್ಥೆ ಜೆಟ್ ಏರ್‌ವೇಸ್ ಬಿಕ್ಕಟ್ಟಿನ ಬಗ್ಗೆ ಚರ್ಚೆ ಮಾಡಲು ಪ್ರಧಾನಿ ಮಂತ್ರಿ ಕಚೇರಿ ತುರ್ತು ಸಭೆ ಕರೆದಿದೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾಥಮಿಕ ಕಾರ್ಯದರ್ಶಿ ಅಧ್ಯಕ್ಷತೆ ವಹಿಸುವ ಸಾಧ್ಯತೆ ಇದೆ.
ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಜೆಟ್ ಏರ್‌ವೇಸ್‌ನ ಪರಿಸ್ಥಿತಿ ಬಗ್ಗೆ ತಿಳಿಸಲು ನಾಗರಿಕ ವಿಮಾನ ಯಾನದ ಪ್ರಧಾನ ನಿರ್ದೇಶಕ ಹಾಗೂ ನಾಗರಿಕ ವಿಮಾನ ಯಾನದ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ಅವರು ಪ್ರಧಾನಿ ಮಂತ್ರಿ ಕಚೇರಿಯ ಅಧಿಕಾರಿಗಳನ್ನು ಭೇಟಿಯಾಗುವ ಸಾಧ್ಯತೆ ಇದೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಜೆಟ್ ಏರ್‌ವೇಸ್ ಪ್ರಸ್ತುತ ದೇಶೀಯ 50ಕ್ಕಿಂತ ಕಡಿಮೆ ಹಾಗೂ ಅಂತಾರಾಷ್ಟ್ರೀಯವಾಗಿ 16ಕ್ಕಿಂತ ಕಡಿಮೆ ವಿಮಾನಗಳ ಹಾರಾಟ ನಡೆಸುತ್ತಿದೆ.
ಅಂತಾರಾಷ್ಟ್ರೀಯವಾಗಿ ಕನಿಷ್ಠ 20 ವಿಮಾನಗಳು ಹಾರಾಟ ನಡೆಸುವುದು ಸರಕಾರದ ನಿಯಮದ ಪ್ರಕಾರ ಕಡ್ಡಾಯವಾಗಿದೆ. ಜೆಟ್ ಏರ್‌ವೇಸ್‌ನ ಬಿಕ್ಕಟ್ಟನ್ನು ಮರು ಪರಿಶೀಲಿಸುವಂತೆ ಹಾಗೂ ಪ್ರಯಾಣಿಕರ ಅನನುಕೂಲತೆಯನ್ನು ಕಡಿಮೆಗೊಳಿಸಲು ಅಗತ್ಯದ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾಗರಿಕ ವಿಮಾನ ಯಾನ ಸಚಿವ ಸುರೇಶ್ ಪ್ರಭು ನಾಗರಿಕ ವಿಮಾನ ಯಾನ ಕಾರ್ಯದರ್ಶಿಗೆ ನಿರ್ದೇಶಿಸಿದ ಬಳಿಕ ಈ ಪಿಎಂಒ ತುರ್ತು ಸಭೆ ಕರೆದಿದೆ. ಜೆಟ್ ಏರ್‌ವೇಸ್ ಇಂದು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸೋಮವಾರದ ವರೆಗೆ ರದ್ದುಗೊಳಿಸಿದೆ.







