ಕೈಗಾರಿಕೋದ್ಯಮಿಗಳ ಜೊತೆ ಕೃಷ್ಣಭೈರೇಗೌಡ ಸಭೆ

ಬೆಂಗಳೂರು, ಎ.12: ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣ ಭೈರೇಗೌಡ ಶುಕ್ರವಾರ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಉದ್ಯಮಿಗಳ(ಎಂಎಸ್‌ಎಂಇ) ಜೊತೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.
ಪೀಣ್ಯ ಟ್ರೇಡ್ ಸೆಂಟರ್ ಸಭಾಂಗಣದಲ್ಲಿ ಆಯೋಜಿಸಿದ್ದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಸಮಗ್ರ ಅಭಿವೃದ್ಧಿ ಆಗಬೇಕಿದ್ದರೆ ಆರ್ಥಿಕ ವಲಯದ ಎಲ್ಲ ಕ್ಷೇತ್ರಗಳಲ್ಲೂ ಬೆಳವಣಿಗೆ ಆಗಬೇಕು ಎಂದರು.
ಕೃಷಿ, ಕೈಗಾರಿಕೆ, ವಾಣಿಜ್ಯೋದ್ಯಮ ಸೇರಿದಂತೆ ಎಲ್ಲ ವಲಯದಲ್ಲಿ ಅಭಿವೃದ್ಧಿ ಆದರೆ ಮಾತ್ರ ದೇಶದ ಆರ್ಥಿಕ ವ್ಯವಸ್ಥೆ ಗಟ್ಟಿಯಾಗಿ ಇರುತ್ತದೆ. ಆದರೆ ದೇಶದಾದ್ಯಂತ ಸೇವಾ ವಲಯದಲ್ಲಿ ಆಗುತ್ತಿರುವ ವೇಗದ ಬೆಳವಣಿಗೆ ಉತ್ಪಾದನಾ ಕ್ಷೇತ್ರದಲ್ಲಿ ಆಗುತ್ತಿಲ್ಲ ಎಂದು ಕೃಷ್ಣಭೈರೇಗೌಡ ಹೇಳಿದರು. ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡುವ ಕೇಂದ್ರದ ಬಿಜೆಪಿ ಸರಕಾರ ಬರೀ ದೊಡ್ಡ ಉದ್ಯಮಿಗಳ ಪರ ಇದೆ. ಎಂಎಸ್‌ಎಂಇ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿದೆ. ಅತಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡಬಹುದಾಗಿದ್ದ ಗಾರ್ಮೆಂಟ್ಸ್ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸೋತಿದೆ ಎಂದು ಅವರು ದೂರಿದರು.
ಗಾರ್ಮೆಂಟ್ಸ್ ಕ್ಷೇತ್ರ ಒಂದರಿಂದಲೇ ನಾವು ಎಲ್ಲ ಬಗೆಯ ಜಾಗತಿಕ ಅವಕಾಶಗಳನ್ನು ಪಡೆದುಕೊಳ್ಳಲು ಅವಕಾಶ ಇತ್ತು. ಆದರೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಬಾಂಗ್ಲಾ ದೇಶಕ್ಕೆ ಅನುಕೂಲ ಆಗಿದೆ. ನಮ್ಮ ಉದ್ಯಮಿಗಳು ಕೂಡ ಅಲ್ಲಿಗೆ ಹೋಗಿ ಹೂಡಿಕೆ ಮಾಡಿದ್ದಾರೆ. ಇವರ ಮೇಕ್ ಇನ್ ಇಂಡಿಯಾ ಹೇಗೆ ಅರ್ಥ ಮಾಡಿಕೊಳ್ಳಬೇಕೋ ತಿಳಿಯುತ್ತಿಲ್ಲ ಎಂದು ಕೃಷ್ಣಭೈರೇಗೌಡ ಹೇಳಿದರು.
ನೋಟ್ ಬ್ಯಾನ್ ಆದ ಬಳಿಕವಂತೂ ಎಂಎಸ್‌ಎಂಇ ಕ್ಷೇತ್ರದಲ್ಲಿನ ಬೆಳವಣಿಗೆ ಇನ್ನಷ್ಟು ಕುಂಠಿತವಾಗಿದೆ. ಈ ಅವಧಿಯಲ್ಲಿ 35 ಲಕ್ಷಕ್ಕೂ ಅಧಿಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಎಂಎಸ್‌ಎಂಇ ಕ್ಷೇತ್ರದ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ಪಕ್ಷ ಹೆಚ್ಚು ಗಮನ ಹರಿಸುತ್ತಿದೆ. ಈ ಕುರಿತು ಪ್ರಣಾಳಿಕೆಯಲ್ಲೂ ಪ್ರಸ್ತಾಪಿಸಿದ್ದೇವೆ ಎಂದು ಅವರು ಹೇಳಿದರು.
ಈ ಹಿಂದೆ ಜಿಎಸ್‌ಟಿ ಮೀಟಿಂಗ್‌ನಲ್ಲಿ ಭಾಗವಹಿಸುವಾಗ ಕಾಂಗ್ರೆಸ್ ಪಕ್ಷದ ನಾಯಕರು ನಮ್ಮನ್ನು ಕರೆದು ಎಂಎಸ್‌ಎಂಇ ಕ್ಷೇತ್ರದ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಒತ್ತಾಯಿಸಿದ್ದರು. ಮುಂದೆಯೂ ಎಂಎಸ್‌ಎಂಇ ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ಪ್ರಯತ್ನ ಮಾಡುತ್ತೇವೆ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಹೆಚ್ಚು ಅಗತ್ಯವಿದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.
ಸಭೆಯಲ್ಲಿ ರಾಜ್ಯಸಭಾ ಸದಸ್ಯ ಪ್ರೊ.ರಾಜೀವ್ ಗೌಡ, ದಾಸರಹಳ್ಳಿ ಶಾಸಕ ಮಂಜುನಾಥ್ ಹಾಗೂ ಎಂಎಸ್‌ಎಂಇ ಉದ್ಯಮಿಗಳು ಭಾಗವಹಿಸಿದ್ದರು. ಇದೇ ವೇಳೆ ಎಂಎಸ್‌ಎಂಇ ಉದ್ಯಮಿಗಳು ತಮ್ಮ ಕ್ಷೇತ್ರಕ್ಕೆ ಅಗತ್ಯ ಇರುವ ಸೌಲಭ್ಯಗಳನ್ನು ಒದಗಿಸುವಂತೆ ಕೃಷ್ಣ ಭೈರೇಗೌಡಗೆ ಲಿಖಿತ ಮನವಿ ಸಲ್ಲಿಸಿದರು.







