ವೀರ್ಯ ಅದಲು ಬದಲು ಮಾಡಿ ತನ್ನದೇ 49 ಮಕ್ಕಳನ್ನು ಹುಟ್ಟಿಸಿದ ವೈದ್ಯ
ಹೇಗ್ (ನೆದರ್ಲ್ಯಾಂಡ್ಸ್), ಎ. 13: ಕೃತಕ ಗರ್ಭದಾನ (ಐವಿಎಫ್) ಕ್ಲಿನಿಕ್ ನಡೆಸುತ್ತಿದ್ದ ನೆದರ್ಲ್ಯಾಂಡ್ಸ್ನ ವೈದ್ಯರೊಬ್ಬರು, ವೀರ್ಯಗಳನ್ನು ಅದಲು ಬದಲು ಮಾಡಿ ಕನಿಷ್ಠ 49 ಮಕ್ಕಳ ಹುಟ್ಟಿಗೆ ಕಾರಣರಾಗಿದ್ದಾರೆ ಎಂದು ಅವರ ಕ್ಲಿನಿಕ್ ಮೂಲಕ ಜನಿಸಿದ ಮಕ್ಕಳು ಮತ್ತು ಅವರ ಹೆತ್ತವರನ್ನು ಪ್ರತಿನಿಧಿಸುವ ಸಂಘಟನೆಯೊಂದು ಹೇಳಿದೆ.
2017ರಲ್ಲಿ ನಿಧನ ಹೊಂದಿದ ಜ್ಯಾನ್ ಕರ್ಬಾತ್ 49 ಮಕ್ಕಳ ಜೈವಿಕ ತಂದೆಯಾಗಿದ್ದಾರೆ. ಈ ವ್ಯಕ್ತಿಯು ರೋಟರ್ಡಾಮ್ನಲ್ಲಿ ಕೃತಕ ಗರ್ಭಧಾರಣೆ ಕ್ಲಿನಿಕ್ ನಡೆಸುತ್ತಿದ್ದರು. ಕೃತಕ ಗರ್ಭಧಾರಣೆಗಾಗಿ ಮಹಿಳೆಯರು ಆಯ್ದ ದಾನಿಯ ವೀರ್ಯದೊಂದಿಗೆ ಅಲ್ಲಿಗೆ ಹೋದರೆ, ಆ ವೈದ್ಯನು ತನ್ನದೇ ವೀರ್ಯವನ್ನು ಬಳಸುತ್ತಿದ್ದನು ಎಂದು ‘ಡಿಫೆನ್ಸ್ ಫಾರ್ ಚಿಲ್ಡ್ರನ್’ ಸಂಘಟನೆ ತಿಳಿಸಿದೆ.
ನಿಜ್ಮೆಗೆನ್ ನಗರದ ಆಸ್ಪತ್ರೆಯೊಂದರಲ್ಲಿ ಶುಕ್ರವಾರ ನಡೆಸಲಾದ ಡಿಎನ್ಎ ಪರೀಕ್ಷೆಗಳ ಫಲಿತಾಂಶವು, ಈ ಪ್ರಕರಣದ 49 ಮಕ್ಕಳು ದಿವಂಗತ ಕರ್ಬಾತ್ಗೆ ನೇರವಾಗಿ ಸಂಬಂಧಪಟ್ಟಿದ್ದಾರೆ ಎಂದು ಹೇಳಿದೆ ಎಂದು ಸಂಘಟನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕರ್ಬಾತ್ 89ನೇ ವರ್ಷದಲ್ಲಿ ಸಾಯುವ ಮೊದಲು, ನನ್ನ ಅವಧಿಯಲ್ಲಿ ನನ್ನ ಕ್ಲಿನಿಕ್ನಲ್ಲಿ ನನ್ನದೇ ವೀರ್ಯವನ್ನು ಬಳಸಿ ಸುಮಾರು 60 ಮಕ್ಕಳ ಹುಟ್ಟಿಗೆ ಕಾರಣನಾಗಿದ್ದೇನೆ ಎಂಬುದಾಗಿ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಅವರ ಕ್ಲಿನಿಕನ್ನು ಅವ್ಯವಹಾರಗಳ ಆರೋಪದಲ್ಲಿ 2009ರಲ್ಲಿ ಮುಚ್ಚಲಾಗಿದೆ.