ಅಲ್ಜೀರಿಯ: ಚುನಾವಣೆಗಾಗಿ ಪ್ರತಿಭಟನೆ ಮುಂದುವರಿಕೆ
ಅಲ್ಜೀರ್ಸ್ (ಅಲ್ಜೀರಿಯ), ಎ. 13: ಅಲ್ಜೀರಿಯದಲ್ಲಿ ಅಧ್ಯಕ್ಷ ಅಬ್ದುಲಝೀಝ್ ರಾಜೀನಾಮೆ ನೀಡಿದ ಬಳಿಕ ಚುನಾವಣೆಯನ್ನು ಘೋಷಿಸಲಾಗಿದೆಯಾದರೂ, ಜನರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಚುನಾವಣೆ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಜನರು ಶುಕ್ರವಾರ ಪ್ರತಿಭಟನೆ ನಡೆಸಿದರು. ಅಧಿಕಾರದಲ್ಲಿ ಉಳಿಯುವುದಕ್ಕಾಗಿ ಆಡಳಿತ ವ್ಯವಸ್ಥೆಯು ವಂಚನೆ ಮಾಡಬಹುದು ಎಂಬ ಭೀತಿಯಲ್ಲಿ, ಒತ್ತಡವನ್ನು ಕಾಯ್ದುಕೊಳ್ಳುವುದಕ್ಕಾಗಿ ಪ್ರತಿಭಟನೆಗಳನ್ನು ಮುಂದುವರಿಸಲು ಜನರು ನಿರ್ಧರಿಸಿದ್ದಾರೆ.
ಮಾಜಿ ಅಧ್ಯಕ್ಷ ಅಬ್ದುಲಝೀಝ್ರ ಎರಡು ದಶಕಗಳ ಆಳ್ವಿಕೆಯು ಕೊನೆಗೊಳ್ಳುವಲ್ಲಿ ಸಾಮಾಜಿಕ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿರುವುದನ್ನು ಸ್ಮರಿಸಬಹುದಾಗಿದೆ. ಈಗ ಅವೇ ಮಾಧ್ಯಮಗಳು, ‘ಅವರೆಲ್ಲಾ ಹೋಗುವಂತೆ’ ನೋಡಿಕೊಳ್ಳಲು ಎಂಟನೇ ವಾರದ ಪ್ರತಿಭಟನೆಯನ್ನು ನಡೆಸುವಂತೆ ಜನರಿಗೆ ಕರೆ ನೀಡಿವೆ.
ಅಧ್ಯಕ್ಷೀಯ ಚುನಾವಣೆ ಜುಲೈ 4ರಂದು ನಡೆಯಲಿದೆ ಎಂಬುದಾಗಿ ಮಧ್ಯಂತರ ನಾಯಕ ಅಬ್ದುಲ್ಕಾದರ್ ಬಿನ್ ಸಲಾಹ್ರ ಕಚೇರಿ ಬುಧವಾರ ಪ್ರಕಟಿಸಿದೆ. ಪಾರದರ್ಶಕ ಚುನಾವಣೆಯನ್ನು ನಡೆಸುವುದಾಗಿ ಕೆಲವು ಗಂಟೆಗಳ ಮೊದಲು ಅವರು ಹೇಳಿದ್ದರು.