ಉಡುಪಿ ಜಿಲ್ಲೆಯ ವೈಷ್ಣವಿಗೆ ಕಾಮರ್ಸ್‌ನಲ್ಲಿ 3ನೇ ರ್ಯಾಂಕ್

ಉಡುಪಿ, ಎ.15: ಇಂದು ಪ್ರಕಟವಾದ ಪಿಯುಸಿ ಫಲಿತಾಂಶದ ಕಾಮರ್ಸ್ ವಿಭಾಗದಲ್ಲಿ ಮೂರನೇ ರ್ಯಾಂಕ್ (594 ಅಂಕ) ಪಡೆದಿರುವ ಬೆಂಗಳೂರು ಬಸವೇಶ್ವರ ನಗರದ ಕಡಂಬಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವೈಷ್ಣವಿ ಕೆ. ಮೂಲತ: ಜಿಲ್ಲೆಯ ಶಂಕರನಾರಾಯಣದವರು.
ಫಲಿತಾಂಶ ಇಷ್ಟು ಬೇಗ ಬರುವ ನಿರೀಕ್ಷೆ ಇಲ್ಲದ ವೈಷ್ಣವಿ, ಸಾಸ್ತಾನದ ಪಾಂಡೇಶ್ವರದಲ್ಲಿರುವ ತನ್ನ ಅಜ್ಜಿಯ ಮನೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದು, ಕುಟುಂಬದ ಸದಸ್ಯರ ಮಧ್ಯೆ ರ್ಯಾಂಕ್ ಪಡೆದ ಸಂಭ್ರಮವನ್ನು ಆಚರಿಸಿಕೊಂಡರು. ಹೆತ್ತವರು ಬೆಂಗಳೂರಿನಲ್ಲಿದ್ದು, ನಾಳೆ ಸಂಜೆ ಬೆಂಗಳೂರಿಗೆ ತೆರಳುವುದಾಗಿ ತಿಳಿಸಿದರು.
ಬೆಂಗಳೂರಿನ ಮಂಜುನಾಥ ನಗರದ ಕೃಷ್ಣಮೂರ್ತಿ ಐತಾಳ್ ಹಾಗೂ ಶೋಭಾ ಕೃಷ್ಣಮೂರ್ತಿ ದಂಪತಿಗಳ ಏಕೈಕ ಪುತ್ರಿ ವೈಷ್ಣವಿ, ಬಸವೇಶ್ವರನಗರದ ಕಡಂಬಿ ಪ.ಪೂ.ಕಾಲೇಜಿನ ವಿದ್ಯಾರ್ಥಿನಿ. ತಂದೆ ಸ್ಟೇಶನರಿ ಅಂಗಡಿಯೊಂದನ್ನು ಹೊಂದಿದ್ದು, ತಾಯಿ ಗೃಹಣಿ. ರ್ಯಾಂಕ್‌ನ ನಿರೀಕ್ಷೆಯನ್ನು ಇಟ್ಟುಕೊಂಡಿಲ್ಲ ದಿದ್ದರೂ, ಉತ್ತಮ ಅಂಕದ ನಿರೀಕ್ಷೆಯಂತೂ ಇತ್ತು. ಇದಕ್ಕೆ ಪ್ರಿಪರೇಟರಿ ಪರೀಕ್ಷೆಯಲ್ಲಿ ಪಡೆದ ಅಂಕಗಳೇ ತನಗೆ ಧೈರ್ಯ ನೀಡಿತ್ತು ಎಂದರು.
ಬ್ಯುಸಿನೆಸ್, ಅಕೌಂಟೆನ್ಸಿ, ಸ್ಟಾಟ್ ಹಾಗೂ ಬೇಸಿಕ್ ಮ್ಯಾಥ್ಸ್‌ನೊಂದಿಗೆ ಸಂಸ್ಕೃತದಲ್ಲಿ ತಲಾ 100 ಅಂಕಗಳನ್ನು ಪಡೆದಿರುವ ವೈಷ್ಣವಿ, ಇಂಗ್ಲೀಷ್‌ನಲ್ಲಿ ಮಾತ್ರ 94 ಅಂಕ ಪಡೆದಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು ಬಸವೇಶ್ವರ ನಗರದ ಫ್ಲಾರೆನ್ಸ್ ಹೈಸ್ಕೂಲ್‌ನಲ್ಲಿ ಪಡೆದಿರುವ ಅವರು ಎಸೆಸೆಲ್ಸಿಯಲ್ಲಿ 614 (ಶೇ.98.24) ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದರು.
ಫಲಿತಾಂಶ ಬೇಗ ಬಂದಿರುವುದರಿಂದ ಭವಿಷ್ಯದ ಕುರಿತು ಸ್ಪಷ್ಟ ಅಂತಿಮ ನಿರ್ಧಾರವನ್ನು ಇನ್ನೂ ತೆಗೆದುಕೊಂಡಿಲ್ಲ ಎಂದ ವೈಷ್ಣವಿ, ಮುಂದೆ ಬಿಕಾಂ ಪದವಿಯೊಂದಿಗೆ ಸಿಎಸ್ ಅಥವಾ ಸಿಎಂಎಯಂಥ ವೃತ್ತಿಪರ ಕೋರ್ಸ್‌ಗಳನ್ನು ಮಾಡುವ ಇಚ್ಚೆ ವ್ಯಕ್ತಪಡಿಸಿದರು. ಸಿಎ ಯಾಕಿಲ್ಲ ಎಂದು ಪ್ರಶ್ನಿಸಿದರೆ, ವಿಭಿನ್ನವಾಗಿರಲಿ ಎಂದು ಬೇರೆ ಕೋರ್ಸ್‌ನ್ನು ಆಯ್ಕೆ ಮಾಡುತ್ತೇನೆ ಎಂದು ನಕ್ಕರು.
ತನ್ನ ಈ ಸಾಧನೆಗೆ ತಂದೆತಾಯಿಯರ ಆಶೀರ್ವಾದದೊಂದಿಗೆ ತನ್ನ ಉಪನ್ಯಾಸಕರ ಪ್ರೋತ್ಸಾಹವೂ ಕಾರಣ ಎಂದರು. ನಾನು ರ್ಯಾಂಕ್‌ಗಾಗಿ ಓದಿದವಳೇ ಅಲ್ಲ. ಎಷ್ಟು ಬೇಕೊ ಅಷ್ಟು ಮಾತ್ರ ಓದುತಿದ್ದೆ. ದಿನದ ಪಾಠವನ್ನು ಪ್ರತಿ ದಿನ ಓದಿ ಮನನಮಾಡಿಕೊಳ್ಳುತಿದ್ದೆ. ಹೀಗಾಗಿ ಪರೀಕ್ಷೆಯ ವೇಳೆ ಹೆಚ್ಚಿನ ಒತ್ತಡಕ್ಕೆ ಸಿಲುಕುತ್ತಿರಲಿಲ್ಲ.
ಇದರೊಂದಿಗೆ ನನ್ನ ಹವ್ಯಾಸಗಳ್ಯಾವುದನ್ನು ನಾನು ನಿಲ್ಲಿಸಿರಲಿಲ್ಲ. ಪರೀಕ್ಷೆಯ ನಡುವೆ ಸಂಗೀತ, ವೀಣೆಯ ಕ್ಲಾಸ್‌ಗೂ ಹೋಗುತಿದ್ದೆ. ಇದು ನನಗೆ ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ಳಲು ಸಹಾಯಕವಾಗುತ್ತಿತ್ತು ಎಂದರು. ಹಾಗೆ ಸ್ವಲ್ಪ ಸ್ವಲ್ಪ ಟಿವಿ ನೋಡುತಿದ್ದೆ ಹಾಗೂ ಮೊಬೈಲ್‌ನ್ನು ಬಳಸುತಿದ್ದೆ. ಆದರೆ ಯಾವುದೂ ಅತಿ ಇರಲಿಲ್ಲ ಎಂದರು.







