ದಿಲ್ಲಿ ಮಟ್ಟದಲ್ಲಿ ನನ್ನ ವಿರುದ್ಧ ಪಿತೂರಿ ಮಾಡುವುದು ಸಾಮಾನ್ಯವಾಗಿದೆ: ಸಂಸದ ಕೆ.ಎಚ್ ಮುನಿಯಪ್ಪ

ಕೋಲಾರ,ಎ.15: ಪಕ್ಷದ ಗುರುತಿನಲ್ಲಿ ಆಯ್ಕೆಯಾದ ಹಿರಿಯ ಮೇಧಾವಿಗಳಿಗೆ ಸ್ವಾಭಿಮಾನ ಮಾನಮಾರ್ಯದೆ ಇದ್ದರೆ ಮೊದಲು ರಾಜೀನಾಮೆ ಕೊಟ್ಟು ನಂತರ ಧೈರ್ಯ ಇದ್ದರೆ ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ಸಂಸದ ಕೆ.ಎಚ್ ಮುನಿಯಪ್ಪ ತಿಳಿಸಿದರು
ನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಹಾನ್ ಬುದ್ದಿಜೀವಿಗಳಂತೆ ಕೆಲವರನ್ನು ಬ್ರೈನ್ ವಾಷ್ ಮಾಡುತ್ತಾ ಇದ್ದಾರೆ. ಹೇಳುವುದು ನೀತಿಪಾಠ, ಮಾಡುವುದು ಅನಾಚಾರದ ಕೆಲಸಗಳು ಎಂದರು.
ಪ್ರತಿಬಾರಿ ದೆಹಲಿ ಮಟ್ಟದಲ್ಲಿ ನನ್ನ ವಿರುದ್ಧ ಪಿತೂರಿ ಮಾಡುವುದು ಸಾಮಾನ್ಯವಾಗಿದೆ. ಕೆಲವು ಹಿರಿಯ ಮುಖಂಡರು ಮತ್ತು ಮುಖ್ಯಮಂತ್ರಿಯನ್ನು ಖರೀದಿಸುವುದು ಇತ್ಯಾದಿಗಳು ಸಾಮಾನ್ಯವಾಗಿದೆ. ಮತದಾರರು ನನ್ನ ಜೊತೆ ಇರೋವರಗೂ ನನಗೆ ಭಯವಿಲ್ಲ ಎಂದರು.
ಅಂಬೇಡ್ಕರ್ ಪೋಟೋ ಬ್ಯಾನರ್ ಇಟ್ಟುಕೊಂಡು 30 ವರ್ಷ ಜೀವನ ನಡೆಸಿ ಇವತ್ತು ಕೋಮುವಾದಿ ಬಿಜೆಪಿ ಪಕ್ಷಕ್ಕೆ ಮತಹಾಕಿ ಎಂದು ಕೇಳುವುದಕ್ಕೆ ನಾಚಿಕೆಯಾಗಬೇಕು. ಸಂವಿಧಾನವನ್ನು ಸುಟ್ಟವರ ಬದಲಾಯಿಸುತ್ತೇವೆ ಎಂದವರ ಪರವಾಗಿ ಕೆಲಸ ಮಾಡುತ್ತೇವೆ ಎಂದರೆ ಅಂತವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದರು.
ದೇಶದಲ್ಲಿ ಕೋಮುವಾದಿ ಶಕ್ತಿಗಳು ತಲೆ ಎತ್ತದ ರೀತಿಯಲ್ಲಿ ಎಲ್ಲರೂ ಒಂದೇ ಎಂಬಂತೆ ಸಹಬಾಳ್ವೆಯಿಂದ ಬದುಕುವ ವಾತಾವರಣ ಸೃಷ್ಟಿಸಲು ಜಾತ್ಯಾತೀತ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಈ ಬಾರಿ ಚುನಾವಣೆ ಎದುರಿಸುತ್ತಾ ಇದ್ದು, ಮುಂದಿನ ಬದುಕುಗಳ ಬಗ್ಗೆ ಪ್ರಶ್ನೆ ಮಾಡುವ ಬಿಜೆಪಿ ಸರಕಾರ ಐದು ವರ್ಷ ಅಧಿಕಾರ ನಡೆಸಿದ್ದು, ಅದನ್ನು ಬದಲಾವಣೆ ಮಾಡಬೇಕಾಗಿದೆ ಎಂದರು.
ಮಾಜಿ ಸಚಿವ ವರ್ತೂರ್ ಪ್ರಕಾಶ್ ಮಾತನಾಡಿ, ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನ ಸಭಾ ವ್ಯಾಪ್ತಿಯಲ್ಲಿ ಕುಮಾರಸ್ವಾಮಿ ಅವರ ಕೈ ಬಲಪಡಿಸಲು, ಮೈತ್ರಿ ಸರ್ಕಾರ 5 ವರ್ಷ ಉಳಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಮಾಣಿಕವಾಗಿ ಕೆಲಸ ಮಾಡುತ್ತಾ ಇದ್ದಾರೆ ಎಂದರು.
ಚಿಂತಾಮಣಿಯಲ್ಲಿ ಕೆ.ಎಚ್ ಮುನಿಯಪ್ಪ ಕನಿಷ್ಠ 10 ಸಾವಿರ ಮತಗಳ ಮುನ್ನಡೆ ಸಾಧಿಸಲಿದ್ದಾರೆ. ಶ್ರೀನಿವಾಸಪುರದಲ್ಲಿ ರಮೇಶ್ ಕುಮಾರ್ ಡಿಸಿಸಿ ಬ್ಯಾಂಕ್ ನಿಂದ 200 ಕೋಟಿ ಸಾಲ ಕೊಡಿಸಿ ಮಹಿಳೆಯರಿಂದ ಗೆದ್ದಿದ್ದಾರೆ ಎಂದರು. ಶಿಡ್ಲಘಟ್ಟದಲ್ಲಿ ಎರಡು ಪಕ್ಷದವರಿಂದ ಕನಿಷ್ಠ 30 ಸಾವಿರ ಮತಗಳಿಂದ ಕೆ.ಹೆಚ್ ಮುನಿಯಪ್ಪಗೆ ಬರಲಿದ್ದು, ಮುಳಬಾಗಿಲು ಮತ್ತು ಬಂಗಾರಪೇಟೆಯಲ್ಲಿ ಸಮಬಲವಾಗಲಿದೆ. ಕೆಜಿಎಫ್ 10 ಸಾವಿರ, ಮಾಲೂರು ಕ್ಷೇತ್ರದಲ್ಲಿ 5 ಸಾವಿರ ಮತಗಳಿಂದ ಮುನ್ನಡೆ ಸಾಧಿಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ದೌರ್ಜನ್ಯ ದಬ್ಬಾಳಿಕೆ ಇಲ್ಲದೆ 28 ವರ್ಷಗಳಿಂದ ಅಧಿಕಾರ ನಡೆಸಿಕೊಂಡು ಬಂದಿದ್ದಾರೆ. ಅಭಿವೃದ್ಧಿಯ ವಿಷಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಮಾಡಿದ್ದು ಅದು ಯಾರಿಗೂ ಗೊತ್ತಾಗುತ್ತಿಲ್ಲ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಎಐಸಿಸಿ ಕಾರ್ಯದರ್ಶಿ ಮಧುಯಾಕ್ಷೀ ಗೌಡ, ಕಾಂಗ್ರೆಸ್ ಚುನಾವಣಾ ವೀಕ್ಷಕಿ ಕವಿತಾ ವಸಂತಾ, ನಮ್ಮ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಬೆಗ್ಲಿ ಸೂರ್ಯಪ್ರಕಾಶ್, ಮುಖಂಡರಾದ ಅರುಣ್ ಪ್ರಸಾದ್, ಬಂಕ್ ಮಂಜುನಾಥ್ ಸಿಎಸ್ ವೆಂಕಟೇಶ್ ಮುಂತಾದವರು ಮಾತನಾಡಿದರು.
ವೇದಿಕೆಯಲ್ಲಿ ತೂಪಲ್ಲಿ ನಾರಾಯಣಸ್ವಾಮಿ, ಸಾಧೀಕ್ ಪಾಷ, ಸೂಲೂರು ಎಂ ಅಂಜಿನಪ್ಪ, ಮುಂತಾದವರು ಇದ್ದರು.








