ನಾಯಿಗಳಿಗೆ ಆಹಾರ ನೀಡಿದ ಮಹಿಳೆಗೆ 3.60 ಲಕ್ಷ ರೂ. ದಂಡ !

ಮುಂಬೈ, ಎ. 15: ಕಂದಿವಲಿಯಲ್ಲಿರುವ ನಿಸರ್ಗ ಹೆವನ್ ಸೊಸೈಟಿ ಆವರಣದಲ್ಲಿರುವ ಬೀಡಾಡಿ ನಾಯಿಗಳಿಗೆ ಆಹಾರ ನೀಡಿರುವ ಜಾಹಿರಾತು ಪ್ರತಿನಿಧಿ, ಪ್ರಾಣಿ ಪ್ರಿಯೆ ನಿವಾಸಿ ನೇಹಾ ದತ್ವಾನಿ ಮೇಲೆ ಸೊಸೈಟಿ 3.60 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಸೊಸೈಟಿ ಆವರಣದ ಒಳಗಡೆ ನಾಯಿಗಳಿಗೆ ಆಹಾರ ನೀಡುವವರಿಗೆ ದಂಡ ವಿಧಿಸುವ ನಿಯಮವನ್ನು ಸೊಸೈಟಿಯ ಸುಮಾರು ಶೇ. 98 ಸದಸ್ಯರು ರೂಪಿಸಿದ್ದಾರೆ. ಬಹುಸಂಖ್ಯಾತ ಸದಸ್ಯರು ರೂಪಿಸಿದ ನಿಯಮವನ್ನು ಅನುಸರಿಸು ವಂತೆ ಮಾಡುವುದು ನನ್ನ ಕರ್ತವ್ಯ ಎಂದು ಸೊಸೈಟಿಯ ಅಧ್ಯಕ್ಷ ಮಿತೇಶ್ ಬೋರಾ ಹೇಳಿದ್ದಾರೆ.
“ಸೊಸೈಟಿಯ ಆವರಣದ ಹೊರಗಡೆ ಸದಸ್ಯರು ನಾಯಿಗಳಿಗೆ ಆಹಾರ ನೀಡುವುದರಿಂದ ನಮಗೆ ಯಾವುದೇ ತೊಂದರೆ ಇಲ್ಲ. ನಾವು ಕೂಡ ಪ್ರಾಣಿ ಪ್ರಿಯರು. ನಮ್ಮ ನಿರ್ಧಾರದಲ್ಲಿ ಪ್ರಾಣಿಗಳ ಹಕ್ಕುಗಳಿಗೆ ವಿರುದ್ಧವಾದುದು ಯಾವುದೂ ಇಲ್ಲ” ಎಂದು ಬೋರಾ ಹೇಳಿದ್ದಾರೆ.
‘‘ಈ ನಾಯಿಗಳು ಆಕ್ರಮಣಕಾರಿ. ಹಿರಿಯ ನಾಗರಿಕರು, ಮಕ್ಕಳು ಹಾಗೂ ಇತರರನ್ನು ನೋಡಿದರೆ, ಬೊಗಳುತ್ತದೆ. ಇವುಗಳಿಂದ ಸ್ವಚ್ಛತೆಯ ಸಮಸ್ಯೆ ಕೂಡ ಉಂಟಾಗುತ್ತಿದೆ. ಸೊಸೈಟಿಯ ಸದಸ್ಯರಿಂದ ಹಲವು ದೂರುಗಳನ್ನು ಸ್ವೀಕರಿಸಿದ ಬಳಿಕ ಈ ನಿಯಮ ಜಾರಿಗೆ ತರಲಾಯಿತು’’ ಎಂದು ಬೋರಾ ಹೇಳಿದ್ದಾರೆ.
ನಾನು ಈ ಹೌಸಿಂಗ್ ಸೊಸೈಟಿ ಬಿಟ್ಟು ಶೀಘ್ರದಲ್ಲಿ ಹೊರಗಡೆ ಹೋಗಲಿದ್ದೇನೆ. ನನ್ನ ತಾಯಿ ಹಾಗೂ ಸಹೋದರಿ ಅಲ್ಲೇ ಮುಂದುವರಿಯುವುದರಿಂದ ಸೊಸೈಟಿಗೆ ಬಾಕಿ ಇರುವ ಹಣ ಪಾವತಿ ಮಾಡುತ್ತೇನೆ. ಆದರೆ, ದಂಡ ಪಾವತಿಸಲಾರೆ ಎಂದು ನೇಹಾ ದತ್ತಾನಿ ಹೇಳಿದ್ದಾರೆ.







