'ನಿರ್ಭಯ್' ಕ್ಷಿಪಣಿಯ ಯಶಸ್ವಿ ಪರೀಕ್ಷೆ

ಬಾಲಾಸೋರ್(ಒಡಿಶಾ),ಎ.15: ಭಾರತವು ಸೋಮವಾರ ತನ್ನ ಮೊದಲ ಸ್ವದೇಶಿ ನಿರ್ಮಿತ, ದೀರ್ಘವ್ಯಾಪ್ತಿಯ, ಶಬ್ಧಕ್ಕಿಂತ ಕಡಿಮೆ ವೇಗದ ದಾಳಿ ಕ್ಷಿಪಣಿ 'ನಿರ್ಭಯ್'ನ ಪರೀಕ್ಷಾರ್ಥ ಪ್ರಯೋಗವನ್ನು ಇಲ್ಲಿಗೆ ಸಮೀಪದ ಚಂಡಿಪುರದ ಸಮಗ್ರ ಪರೀಕ್ಷಾ ವಲಯ(ಐಟಿಆರ್)ದಿಂದ ಯಶಸ್ವಿಯಾಗಿ ನಡೆಸಿತು.
ಬಹುವೇದಿಕೆಗಳಲ್ಲಿ ನಿಯೋಜಿಸಬಹುದಾದ ಈ ಅತ್ಯಾಧುನಿಕ ಕ್ಷಿಪಣಿಯನ್ನು ಬೆಳಿಗ್ಗೆ 11:44ಕ್ಕೆ ಯಶಸ್ವಿಯಾಗಿ ಉಡಾವಣೆಗೊಳಿಸಲಾಯಿತು ಎಂದು ಡಿಆರ್‌ಡಿಒ ಮೂಲಗಳು ತಿಳಿಸಿದವು.
0.7 ಮ್ಯಾಚ್ ವೇಗದಲ್ಲಿ 100 ಅಡಿಗಳಷ್ಟು ಕಡಿಮೆ ಎತ್ತರದಿಂದಲೂ ಚಲಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವ 'ನಿರ್ಭಯ್' ನಿಗದಿತ ಅಂತರವನ್ನು 42 ನಿಮಿಷಗಳು ಮತ್ತು 23 ಸೆಕೆಂಡ್‌ಗಳಲ್ಲಿ ಕ್ರಮಿಸಿತು ಎಂದು ಅವು ತಿಳಿಸಿದವು.
ಉಡಾವಣೆಯಿಂದ ಹಿಡಿದು ಅಂತಿಮ ಹಂತದವರೆಗೆ ಪರೀಕ್ಷೆಯ ಎಲ್ಲ ಗುರಿಗಳನ್ನು ಯಶಸ್ವಿಯಾಗಿ ಸಾಧಿಸಲಾಗಿದ್ದು, ಇದು ಪರೀಕ್ಷಾರ್ಥ ಹಾರಾಟದೊಂದಿಗೆ ಗುರುತಿಸಿಕೊಂಡ ಎಲ್ಲ ವಿಜ್ಞಾನಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಕ್ಷಿಪಣಿಯು ರಾಕೆಟ್ ಬೂಸ್ಟರ್ ಮತ್ತು ಟರ್ಬೊಫ್ಯಾನ್/ಜೆಟ್ ಸಹಿತ ಇಂಜಿನ್ ಅನ್ನು ಹೊಂದಿದೆ ಎಂದು ಮೂಲಗಳು ವಿವರಿಸಿದವು.
'ನಿರ್ಭಯ್' ಕ್ಷಿಪಣಿಯ ಈ ಹಿಂದಿನ ಯಶಸ್ವಿ ಪರೀಕ್ಷೆ 2017,ನ.7ರಂದು ನಡೆದಿತ್ತು.





