ಸಾಗರವನ್ನು ಉಳಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಲು ಸಕಾಲ: ಸೇಶೆಲ್ಸ್ ಅಧ್ಯಕ್ಷ
ಸೇಶೆಲ್ಸ್, ಎ. 15: ''ನಮ್ಮ ಗ್ರಹದ ಬಡಿಯುತ್ತಿರುವ ನೀಲಿ ಹೃದಯ''ದ ರಕ್ಷಣೆಗಾಗಿ ಕರೆ ನೀಡಲು ಸೇಶೆಲ್ಸ್ ಅಧ್ಯಕ್ಷ ಡ್ಯಾನಿ ಫೌರೀ ರವಿವಾರ ಮತ್ತೊಮ್ಮೆ ಹಿಂದೂ ಮಹಾಸಾಗರ ಆಳಕ್ಕೆ ಧುಮುಕಿದ್ದಾರೆ.
''ನಮ್ಮ ಎದುರು ಇರುವ ಸಮಸ್ಯೆ ನಮ್ಮೆಲ್ಲರಿಗಿಂತಲೂ ಬೃಹತ್ತಾಗಿದೆ. ಅದನ್ನು ಬಗೆಹರಿಸಲು ನಾವು ಮುಂದಿನ ತಲೆಮಾರಿಗಾಗಿ ಕಾಯುವಂತಿಲ್ಲ. ಯಾವುದೇ ಕ್ರಮ ತೆಗೆದುಕೊಳ್ಳದಿರಲು ನೆವಗಳೂ ಮುಗಿಯುತ್ತಿವೆ ಹಾಗೂ ಸಮಯ ಮೀರುತ್ತಿದೆ'' ಎಂದು ಸೇಶೆಲ್ಸ್ ಅಧ್ಯಕ್ಷರನ್ನು ಉಲ್ಲೇಖಿಸಿ ಅವರ ಕಚೇರಿ ನೀಡಿರುವ ಹೇಳಿಕೆಯೊಂದು ತಿಳಿಸಿದೆ.
ಪರಿಸರ ರಕ್ಷಣೆಯನ್ನು ಆದ್ಯತೆಯನ್ನಾಗಿ ಮಾಡಿಕೊಂಡಿರುವ ಫೌರೀ ರವಿವಾರ ನೀರಿನಡಿಯಲ್ಲಿ ಚಲಿಸುವ ವಾಹನ 'ಓಶನ್ ಝೆಫೈರ್'ನಲ್ಲಿ ಹಿಂದೂ ಮಹಾಸಾಗರದಲ್ಲಿ 400 ಅಡಿ ಆಳ (120 ಮೀಟರ್)ಕ್ಕೆ ತೆರಳಿದರು.
''ನಾನು ಸಾಗರದ ಅಮೋಘ ಸೌಂದರ್ಯವನ್ನು ನೋಡಬಲ್ಲೆ. ಆದರೆ, ಇದನ್ನು ಉಳಿಸಿಕೊಳ್ಳಲು ಅಗತ್ಯವಾಗಿ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆಯೂ ಯೋಚಿಸಬೇಕಾಗಿದೆ. ಇದು ನನ್ನ ದೇಶಕ್ಕೆ ಐತಿಹಾಸಿಕ ಕ್ಷಣ'' ಎಂದು 115 ದ್ವೀಪಗಳ ಸಮೂಹವಾಗಿರುವ ತನ್ನ ದೇಶದ ಬಗ್ಗೆ ಫೌರೀ ಹೇಳಿದರು.