ದೇಶ ಪ್ರಿಯಾಂಕಾರನ್ನು ಕಳ್ಳನ ಹೆಂಡತಿಯ ರೂಪದಲ್ಲಿ ನೋಡುತ್ತದೆ ಎಂದ ಉಮಾ ಭಾರತಿ

ಹೊಸದಿಲ್ಲಿ, ಎ.17: ದೇಶದ ಜನತೆ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ‘ಕಳ್ಳನ ಪತ್ನಿ’ಯ ರೂಪದಲ್ಲಿ ಕಾಣುತ್ತದೆ ಎಂದು ಹೇಳಿರುವ ಕೇಂದ್ರ ಸಚಿವೆ ಉಮಾ ಭಾರತಿ ವಿವಾದದ ಕಿಡಿ ಹೊತ್ತಿಸಿದ್ದಾರೆ.
‘ಚೋಕಿದಾರ್ ಚೋರ್ ಹೈ’ ಎಂದು ಕಾಂಗ್ರೆಸ್ ಪ್ರಧಾನಿ ವಿರುದ್ಧ ಆರೋಪಿಸುತ್ತಿರುವುದರಿಂದ ಕೆಂಡಾಮಂಡಲವಾಗಿರುವ ‘ಫೈಯರ್ ಬ್ರಾಂಡ್’ನಾಯಕಿ ಖ್ಯಾತಿಯ ಉಮಾಭಾರತಿ ತನ್ನ ನಾಲಗೆಯನ್ನು ಹರಿಬಿಟ್ಟಿದ್ದಾರೆ.
ಉತ್ತರಪ್ರದೇಶದಲ್ಲಿನ ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಯಾವುದೇ ಪ್ರಭಾವಬೀರುವುದಿಲ್ಲ ಎಂದು ಉಮಾಭಾರತಿ ಹೇಳಿದ್ದಾರೆ.
ವಾರಾಣಸಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ಕೇಳಿದಾಗ,‘‘ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಯಾರೂ ಕೂಡ ಎಲ್ಲಿಯೂ ಸ್ಪರ್ಧಿಸಬಹುದು’’ ಎಂದರು.
ಮುಂಬರುವ ಚುನಾವಣೆಯ ಫಲಿತಾಂಶದ ಮೇಲೆ ಪ್ರಿಯಾಂಕಾ ಗಾಂಧಿ ಪ್ರಭಾವ ಬೀರುತ್ತಾರೆಂಬ ವಾದವನ್ನು ಒಪ್ಪದ ಉಮಾ ಭಾರತಿ,‘‘ಏನೂ ಆಗುವುದಿಲ್ಲ. ಆಕೆಯಿಂದ ಯಾವ ಪ್ರಭಾವ ಬೀರಲು ಸಾಧ್ಯವಿದೆ... ಆಕೆಯ ಪತಿ ಕಳ್ಳತನದ ಪ್ರಕರಣ ಎದುರಿಸುತ್ತಿದ್ದಾರೆ. ನಮ್ಮ ದೇಶದ ಜನತೆ ಆಕೆಯನ್ನು ಕಳ್ಳನ ಪತ್ನಿಯ ರೂಪದಲ್ಲಿ ಕಾಣುತ್ತಾರೆೆ’’ ಎಂದರು.
‘‘ಅಮೇಠಿ ಹಾಗೂ ವಯನಾಡ್‌ನಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸೋಲನ್ನು ಒಪ್ಪಿಕೊಂಡಿದ್ದಾರೆ. ಆದರೆ, ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು. ಬಯಸಿದ್ದಷ್ಟು ಚುನಾವಣೆ ಎದುರಿಸಬಹುದು’’ ಎಂದರು.







