ಚಿಂಚೋಳಿ ಉಪ ಚುನಾವಣೆ: ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಿ ತೀರ್ಮಾನ- ಯಡಿಯೂರಪ್ಪ

ಕಲಬುರ್ಗಿ, ಎ. 17: ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ ಶೀಘ್ರವೇ ಅಭ್ಯರ್ಥಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಾ.ಉಮೇಶ್ ಜಾಧವ್ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾದ ಕ್ಷೇತ್ರದ ಚುನಾವಣಾ ಆಯೋಗ ಉಪ ಚುನಾವಣೆ ಘೋಷಣೆ ಮಾಡಿದೆ. ಇದೇ ವೇಳೆ ಕುಂದಗೋಳ ಕ್ಷೇತ್ರಕ್ಕೂ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದರು.
ಖರ್ಗೆ ಸಾಧನೆ ಏನು: ಪ್ರಧಾನಿ ಮೋದಿ ಸಾಧನೆ ಶೂನ್ಯ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಆದರೆ, 42 ವರ್ಷಗಳಲ್ಲಿ ಖರ್ಗೆ ಅವರ ಸಾಧನೆ, ಕೊಡುಗೆ ಏನು ಎಂದು ಪ್ರಶ್ನಿಸಿದ ಯಡಿಯೂರಪ್ಪ, 1970ರಲ್ಲಿ ಕಲಬುರಗಿಯಲ್ಲಿ ಜೀವನಮಟ್ಟ ಹೇಗಿತ್ತೋ ಈಗಲೂ ಹಾಗೇಯೇ ಇದೆ ಎಂದರು.
ಮಾನವ ಅಭಿವೃದ್ಧಿ ಸೂಚ್ಯಂಕ ಕುಸಿದಿದೆ. ಎಸೆಸೆಲ್ಸಿ, ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆ ಇಂದಿಗೂ ಕೊನೆಯ ಸ್ಥಾನದಲ್ಲಿದೆ. ಸಾಮಾಜಿಕ, ಆರ್ಥಿಕವಾಗಿ ಸುಧಾರಣೆ ಆಗಿಲ್ಲ. ನಗರದ ಎಷ್ಟೋ ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಸಮರ್ಪಕ ಕುಡಿಯುವ ನೀರು ಪೂರೈಕೆ ಇಂದಿಗೂ ಸಾಧ್ಯವಾಗಿಲ್ಲ. ವಾಸ್ತವ ಸ್ಥಿತಿ ಹೀಗಿರುವಾಗ ಅಭಿವೃದ್ಧಿ ಆಗಿದ್ದಾದರೂ ಏನು ಎಂದು ಕೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಇಎಸ್‌ಐ ಆಸ್ಪತ್ರೆ, ವಿಮಾನ ನಿಲ್ದಾಣ ಯಾರಿಂದ ಆಗಿದೆ ಎಂಬುದನ್ನು ಖರ್ಗೆ ಅವರು ಸರಿಯಾಗಿ ಹೇಳಬೇಕು. ಅದು ಬಿಟ್ಟು ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದ ಅವರು, ಬಿಜೆಪಿಗೆ 2014ರ ಅವಧಿಗಿಂತ 10 ಪಟ್ಟು ಹೆಚ್ಚು ಉತ್ತಮ ವಾತಾವರಣವಿದೆ. ಹೀಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದರು.
ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಹೀಗಾಗಿ ಏನನ್ನೂ ಮಾತನಾಡುವುದಿಲ್ಲ. ಎಪ್ರಿಲ್ 23ರ ಸಂಜೆ ನಾನೆ ಪತ್ರಿಕಾಗೋಷ್ಠಿ ಕರೆದು ಎಲ್ಲವನ್ನೂ ಹೇಳುತ್ತೇನೆ. ಖರ್ಗೆ ರಾಷ್ಟ್ರಮಟ್ಟದ ನಾಯಕರು. ಅವರು ದೇಶದಾದ್ಯಂತ ಪ್ರಚಾರಕ್ಕೆ ಹೋಗಬೇಕು. ಆದರೆ, ಕಲಬುರಗಿ ಬಿಟ್ಟು ಕದಲುತ್ತಿಲ್ಲ. ಅವರಿಗೆ ಭಯ ಆರಂಭವಾಗಿದೆ
-ಡಾ.ಉಮೇಶ್ ಜಾಧವ್, ಬಿಜೆಪಿ ಅಭ್ಯರ್ಥಿ







