ಸುಳ್ಳು ಹೇಳಿದ್ದೇ ಪ್ರಹ್ಲಾದ್ ಜೋಶಿ ಸಾಧನೆ: ವಿನಯ್ ಕುಲಕರ್ಣಿ

ಹುಬ್ಬಳ್ಳಿ, ಎ.17: 15 ವರ್ಷಗಳ ಕಾಲ ಸಂಸದರಾಗಿ ಪ್ರಹ್ಲಾದ್ ಜೋಶಿ ಮಾಡಿದ ಏಕೈಕ ಸಾಧನೆ ಎಂದರೆ ಅದು ಸುಳ್ಳು ಹೇಳುವುದು ಮಾತ್ರ ಎಂದು ಧಾರವಾಡ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಆರೋಪಿಸಿದರು.
ಬುಧವಾರ ಹುಬ್ಬಳ್ಳಿಯ ಶಿರಡಿನಗರ, ಚಂದ್ರನಾಥನಗರ, ಇಂದಿರಾ ನಗರ, ಚಾಮುಂಡೇಶ್ವರಿನಗರ, ಬಾರಾಕೋಟ್ರಿ, ರಾಮನಗರ ಸೇರಿದಂತೆ ವಿವಿಧೆಡೆ ರೋಡ್ ಶೋ ನಡೆಸಿ ಮತಯಾಚಿಸುವ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಅಭ್ಯರ್ಥಿಗೆ ಮೋದಿ ಅವರ ಹೆಸರೊಂದೆ ಬಂಡವಾಳವಾಗಿದ್ದು, ಕ್ಷೇತ್ರಕ್ಕೆ ಇವರ ಸಾಧನೆ ಶೂನ್ಯವಾಗಿದೆ. ತಮ್ಮನ್ನು ನೋಡಿ ಯಾರೂ ಮತ ಹಾಕುವುದಿಲ್ಲ ಎಂದು ತಿಳಿದು, ಮೋದಿ ಮುಖ ನೋಡಿ ಮತ ಹಾಕಿ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
‘ಮಗನಿಗೆ ಅಪ್ಪನ ಮುಖ ನೋಡಿ ಕನ್ಯೆ ಕೊಡಿ’ ಎಂಬಂತೆ ಜನರ ಎದುರು ಮತ ಕೇಳುತ್ತಿದ್ದಾರೆ. ಲಿಂಗಾಯತ ಸಮುದಾಯದ ವಿರುದ್ಧ ಜೋಶಿಯವರು ಏನೆಲ್ಲ ಕುತಂತ್ರ ಮಾಡಿದ್ದಾರೆ ಎಂಬುದು ಸಮಾಜದವರ ಅರಿವಿಗೆ ಬಂದಿದೆ. ಬಿಜೆಪಿಯಿಂದ 9 ಲಿಂಗಾಯತ ಸಂಸದರು ಆಯ್ಕೆಯಾದರೂ ಒಬ್ಬರಿಗೂ ಸಚಿವ ಸ್ಥಾನ ನೀಡದೆ ಅವಮಾನಿಸಲಾಗಿದೆ ಎಂದು ವಿನಯ್ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದ ಸಮಸ್ಯೆ ಬಗ್ಗೆ ಅರಿವಿದ್ದು ನಿಮ್ಮ ಮನೆ ಮಗನಾಗಿ ಪ್ರಾಮಾಣಿಕ ಸೇವೆ ಸಲ್ಲಿಸುವೆ. ಹಸ್ತದ ಗುರುತಿಗೆ ಮತ ಹಾಕುವ ಮೂಲಕ ತಮ್ಮನ್ನು ಆಯ್ಕೆ ಮಾಡಬೇಕು ಎಂದು ವಿನಯ್ ಕುಲಕರ್ಣಿ ವಿನಂತಿಸಿದರು. ಇದೇ ಸಂದರ್ಭದಲ್ಲಿ ಕೇಶ್ವಾಪುರದ ಸರ್ವೋದಯ ಸರ್ಕಲ್ ಬಳಿ ಮದರ್ ತೆರೆಸಾ ಪ್ರತಿಮೆಗೆ ಅವರು ಮಾಲಾರ್ಪಣೆ ಮಾಡಿದರು.
ಮುಖಂಡರಾದ ನಾಗರಾಜ ಛಬ್ಬಿ, ರಾಜಣ್ಣ ಕೊರ, ಬಂಗಾರೇಶ ಹಿರೇಮಠ, ಪಪ್ಪಿರಾಯನಗೌಡ್ರ, ಸತೀಶ್ ಮೆಹರವಾಡೆ, ಅನೀಲ್ ಕುಮಾರ್ ಪಾಟೀಲ್, ಎಂ.ಎಸ್.ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







