ಸರಕಾರಿ, ಖಾಸಗಿ ವಾಯುಯಾನ ಸಂಸ್ಥೆಗಳ ನಡುವೆ ಸರಕಾರದಿಂದ ತಾರತಮ್ಯ: ವಿಜಯ ಮಲ್ಯ

ಲಂಡನ್, ಎ. 17: ಭಾರತದ ಬ್ಯಾಂಕ್‌ಗಳಿಗೆ ವಂಚಿಸಿ ಲಂಡನ್‌ನಲ್ಲಿ ಆಶ್ರಯ ಪಡೆದಿರುವ ವಿಜಯ ಮಲ್ಯ ಬುಧವಾರ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಜೆಟ್ ಏರ್‌ವೇಸ್ ಸ್ಥಾಪಕ ನರೇಶ್ ಗೋಯಲ್‌ಗೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಅದೇ ವೇಳೆ, ತಾನು ಭಾರತದ ಬ್ಯಾಂಕ್‌ಗಳಿಗೆ ನೀಡಬೇಕಾಗಿರುವ ಎಲ್ಲ ಹಣವನ್ನು ಮರುಪಾವತಿಸುವುದಾಗಿ ಪುನರುಚ್ಚರಿಸಿದ್ದಾರೆ.
ಭಾರತ ಸರಕಾರವು ಖಾಸಗಿ ವಿಮಾನಯಾನ ಸಂಸ್ಥೆಗಳ ವಿರುದ್ಧ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ವಿಜಯ ಮಲ್ಯ ಈ ಬಾರಿ ಆರೋಪಿಸಿದ್ದಾರೆ. ಸರಕಾರವು ಸರಕಾರಿ ಒಡೆತನದ ಏರ್ ಇಂಡಿಯಾವನ್ನು ಸಂಕಷ್ಟದಿಂದ ಪಾರುಮಾಡಿದೆ, ಆದರೆ ನನ್ನ ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಮತ್ತು ಈಗ ಜೆಟ್ ಏರ್‌ವೇಸ್‌ಗೆ ನೆರವು ನೀಡಿಲ್ಲ ಎಂದು ಅವರು ಹೇಳಿದ್ದಾರೆ.
‘‘ಆ ಸಮಯದಲ್ಲಿ ನನ್ನ ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಜೆಟ್ ಏರ್‌ವೇಸ್‌ಗೆ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದರೂ, ಅಷ್ಟೊಂದು ದೊಡ್ಡ ವಾಯುಯಾನ ಸಂಸ್ಥೆ ವಿಪತ್ತಿಗೆ ಸಿಲುಕಿರುವುದನ್ನು ನೋಡಿ ವಿಷಾದವಾಗುತ್ತಿದೆ. ಸರಕಾರವು ಏರ್ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡುವುದಕ್ಕಾಗಿ 35,000 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ಬಳಸಿದೆ. ಸರಕಾರಿ ಸ್ವಾಮ್ಯದ ಸಂಸ್ಥೆಗಳೆಂದ ಮಾತ್ರಕ್ಕೆ ತಾರತಮ್ಯ ಮಾಡುವಂತಿಲ್ಲ’’ ಎಂದು ಮಲ್ಯ ಟ್ವಿಟರ್‌ನಲ್ಲಿ ಬರೆದಿದ್ದಾರೆ.
100 ಶೇಕಡ ಹಣ ವಾಪಸ್ ಮಾಡುತ್ತೇನೆ!
‘‘ನಾನು ಕಿಂಗ್‌ಫಿಶರ್ ಏರ್‌ಲೈನ್ಸ್‌ನಲ್ಲಿ ಭಾರೀ ಪ್ರಮಾಣದ ಹಣವನ್ನು ಹೂಡಿಕೆ ಮಾಡಿದ್ದೇನೆ. ಅದು ಭಾರತದ ಅತ್ಯಂತ ದೊಡ್ಡ ಹಾಗೂ ಅತಿ ಹೆಚ್ಚು ಪ್ರಶಸ್ತಿ ವಿಜೇತ ವಾಯುಯಾನ ಸಂಸ್ಥೆ ಆಗುವುದರಲ್ಲಿತ್ತು. ಹೌದು, ಕಿಂಗ್‌ಫಿಶರ್ ಸರಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆದಿತ್ತು. ನಾನೀಗ 100 ಶೇಕಡ ಹಣವನ್ನು ವಾಪಸ್ ಮಾಡುತ್ತಿದ್ದೇನೆ. ಆದರೆ, ನನ್ನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಲಾಗಿದೆ. ಏರ್‌ಲೈನ್ ಕರ್ಮ?’’ ಎಂದು ಮಲ್ಯ ಟ್ವಿಟರ್‌ನಲ್ಲಿ ಬರೆದಿದ್ದಾರೆ.







