ಮೋದಿ ಮತ್ತೆ ಪ್ರಧಾನಿಯಾದರೆ ರೈತರಿಗೆ ಗಂಡಾಂತರ: ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್

ಬೆಳಗಾವಿ, ಎ.17: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ರೈತರು ಬೆಳೆದ ಬೆಳೆಗೆ ಸರಿಯಾದ ದರ ನೀಡುತ್ತಿಲ್ಲ. ರೈತರ ಸಮಸ್ಯೆಗಳಿಗೆ ಸರಕಾರದಿಂದ ಸೂಕ್ತ ಸ್ಪಂದನೆ ಸಿಗದೆ, ರೈತರು ಸಂಕಷ್ಟ ಪಡುವಂತಾಗಿದೆ. ಮೋದಿ ಮತ್ತೆ ಪ್ರಧಾನಿಯಾದರೆ ರೈತರಿಗೆ ಗಂಡಾಂತರ ತಪ್ಪಿದ್ದಲ್ಲ ಎಂದು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ನಗರದ ಬೈಲಹೊಂಗಲ ತಾಲೂಕಿನ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಆಶ್ರಯದಲ್ಲಿ ನಡೆದ ರೈತರ ಸಮಸ್ಯೆಗಳ ಕುರಿತು ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಪಕ್ಷ ಆರಿಸಿ ಬರುವಂತಾಗಬೇಕು ಎಂದರು.
ಕಳೆದ 70 ವರ್ಷಗಳಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಏನನ್ನು ಮಾಡಲಿಲ್ಲ ಎಂದು ಮೋದಿ ಸರಕಾರ ಆರೋಪಿಸುತ್ತದೆ. ಆದರೆ ಬಿಜೆಪಿ ಅಧಿಕಾರವಧಿಯಲ್ಲಿ ಅವರ ಸರಕಾರ ಏನು ಮಾಡಿದೆ? ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿಗಳ ಕಾಮಗಾರಿ ಮೋದಿ ಅಧಿಕಾರದಲ್ಲಿ ಆಗಿದ್ದವೇ? ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದನ್ನು ಜನ ತೀರ್ಮಾನಿಸುತ್ತಾರೆ ಎಂದು ಅವರು ಹೇಳಿದರು.
ಸ್ವಾಭಿಮಾನದಿಂದ ಬದುಕುವ ರೈತರು ಸಂಕಷ್ಟದಲ್ಲಿದ್ದರೂ ಅವರ ಕಷ್ಟಗಳಿಗೆ ಸ್ಪಂದಿಸುವ ಯೋಜನೆಯನ್ನು ಹಾಕಿಕೊಳ್ಳದೆ ನರೇಂದ್ರ ಮೋದಿ ಸರಕಾರ ರೈತರಿಗೆ ದ್ರೋಹ ಎಸಗಿದೆ ಎಂದು ದೂರಿದ ಅವರು, ನಾಟಕೀಯ ಬೆಳವಣಿಗೆಗೆ ಜನ ಚಪ್ಪಾಳೆ ತಟ್ಟಿ ಮೋದಿ ಹವಾ ಇದೆ ಎನ್ನುವುದು ಯಾವ ನ್ಯಾಯ ಎಂದರು.
ಇತರ ರಾಜ್ಯಗಳಲ್ಲಿ ಮೋದಿ ಹವಾಗಿಂತ ಪ್ರಾದೇಶಿಕ ಪಕ್ಷಗಳ ಹವಾ ಹೆಚ್ಚಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಯಾವ ಹಳ್ಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎನ್ನುವುದನ್ನು ತಿಳಿಸಿ, ಈ ಮೊದಲೆ ಎಲ್ಲ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ದೊರಕಿರುವುದು ಗೊತ್ತಿರುವ ವಿಷಯ. ಪ್ರಧಾನಿ ಮೋದಿ ಒಬ್ಬ ಸುಳ್ಳುಗಾರ ಎನ್ನುವುದು ಶತಸಿದ್ಧವಾಗಿದೆ ಎಂದು ಪರೋಕ್ಷವಾಗಿ ಕೇಂದ್ರ ಬಿಜೆಪಿ ಸರಕಾರವನ್ನು ಕುಟುಕಿದರು.
ಫಸಲ್ ಬಿಮಾ ಯೋಜನೆ ಹಣ ಸರಕಾರದಿಂದ ರೈತರಿಗೆ ಮುಟ್ಟುತ್ತಿಲ್ಲ. ಕೇವಲ ವಿಮಾ ಕಂಪನಿಗಳು ಹಣ ಮಾಡಿಕೊಂಡವು. ರೈತರಿಗೆ ಆರು ಸಾವಿರ ರೂ. ಕೊಡುತ್ತೇನೆಂದು ಮೋದಿ ಹೇಳಿರುವುದು ಎಷ್ಟು ಸೂಕ್ತ. ಇದರಿಂದ ರೈತರ ಹೊಟ್ಟೆ ತುಂಬುವುದಿಲ್ಲ. ಇಂದು ರೈತರು ಉತ್ತಮ ಬದುಕು ಸಾಗಿಸುವ ಕುರಿತು ವಿಚಾರ ಮಾಡುವ ಸರಕಾರದ ಅಗತ್ಯವಿದೆ ಎಂದು ಬಾಬಾಗೌಡ ಪಾಟೀಲ್ ಹೇಳಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಉತ್ತಮ ಆಡಳಿತ ನೀಡುತ್ತಿದೆ. ಅವರ ಅಧಿಕಾರಾವಧಿಯಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿವೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಸಮ್ಮಿಶ್ರ ಸರಕಾರ ಭದ್ರವಾಗಿರಲು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸಬೇಕು ಎಂದು ಅವರು ಕರೆ ನೀಡಿದರು.
ರೈತ ಮುಖಂಡರಾದ ಶ್ರೀಶೈಲ ಬೊಳನ್ನವರ, ಮಹಾಂತೇಶ ರಾಹುತ, ಚನಬಸಪ್ಪರಾಚನ್ನವರ ಮಾತನಾಡಿ, ರೈತರು ಬೆಳದ ಬೆಳೆಗಳಿಗೆ ಯೋಗ್ಯ ಬೆಳೆ ಸಿಗದೆ ರೈತರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗುವಂತಾಗಿದೆ. ದೇಶದ ಬೆನ್ನೆಲುಬಾದ ಕೃಷಿ ಕ್ಷೇತ್ರ ಲಾಭದಾಯಕವಾಗುವಂತೆ ಸರಕಾರ ರೂಪಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ವಲಯದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ರೈತರ ಸಮಸ್ಯೆಗಳಿಗೆ ಸರಕಾರ ಸ್ಪಂದನೆ ಮಾಡುವಂತಾಗಬೇಕು. ಉತ್ತಮ ಆಡಳಿತ ನೀಡಿ ಲೋಕಸಭೆಯಲ್ಲಿ ರೈತರ ಸಮಸ್ಯೆ ಕುರಿತು ಚರ್ಚಿಸಿ ರೈತರ ನೋವನ್ನು ಶಮನಗೊಳಿಸುವ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳುಹಿಸಬೇಕೆಂದು ಅವರು ಮನವಿ ಮಾಡಿದರು.
ಸಂವಾದದಲ್ಲಿ ರೈತ ಮುಖಂಡರಾದ ಚಂದ್ರಶೇಖರ ಸಾಧುನವರ, ಅರ್ಜುನ ಜಾಧವ, ರಾಮಣ್ಣ ಅಂಕಲಗಿ, ಮಲ್ಲಿಕಾರ್ಜುನ ಹುಂಬಿ, ಗೀರಿಶ್ ಕುಲಕರ್ಣಿ, ಮಾರುತಿ ಗೋಳಬಾಳ, ಮಂಜುನಾಥ ವಸ್ತ್ರದ, ನಿಂಗಪ್ಪಚಬ್ಬಿ, ಬಸವರಾಜ ಡೊಗರಗಾಂ, ಶ್ರೀಕಾಂತ ಶಿರಹಟ್ಟಿ, ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲೆಯ ಪ್ರಮುಖ ಮುಖಂಡರು, ಸಾವಿರಾರು ರೈತರು ಪಾಲ್ಗೊಂಡಿದ್ದರು.







