ಶುಭಕೋರುವ ನೆಪದಲ್ಲಿ ಸಿದ್ದರಾಮಯ್ಯಗೆ ಮುತ್ತು ಕೊಟ್ಟ ಯುವಕ

ಕಲಬುರಗಿ, ಎ.18: ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ವೇದಿಕೆ ಮೇಲೆ ಶುಭಕೋರಲು ಬಂದು ಯುವಕನೊಬ್ಬ ಮುತ್ತು ಕೊಟ್ಟಿದ್ದು, ಯುವಕನ ಈ ನಡವಳಿಕೆಗೆ ಸಿದ್ದರಾಮಯ್ಯ ಕ್ಷಣ ಕಾಲ ವಿಚಲಿತರಾಗಿ, ಗರಂ ಆಗಿದ್ದಾರೆ.
ಜಿಲ್ಲೆಯ ಜೇವರ್ಗಿಯ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರಿಗೆ ವೇದಿಕೆ ಮೇಲೆ ಸನ್ಮಾನ ಮಾಡಲಾಗುತ್ತಿತ್ತು. ಈ ವೇಳೆ ಸಿದ್ದರಾಮಯ್ಯ ಅಭಿಮಾನಿಗಳ ಗುಂಪಿನಲ್ಲಿ ಶುಭ ಕೋರಲು ಬಂದ ಯುವಕ ಮುತ್ತು ಕೊಡಲು ಯತ್ನಿಸಿದ್ದಾನೆ. ಯುವಕನ ವರ್ತನೆ ಕಂಡು ಸಿದ್ದರಾಮಯ್ಯ ಅವರು ಆತನ ವಿರುದ್ಧ ಗರಂ ಆಗಿದ್ದಾರೆ.
ಸಿದ್ದರಾಮಯ್ಯ ಅವರನ್ನು ಕಂಡರೆ ಸಾಮಾನ್ಯವಾಗಿ ಸೆಲ್ಫಿ ತೆಗೆದುಕೊಳ್ಳಲು ನೂಕುನುಗ್ಗಲು ನಡೆಯುತ್ತಿತ್ತು. ಆದರೆ, ಯುವಕ ಮುತ್ತು ಕೊಡಲು ಯತ್ನಿಸಿ ನೆರೆದಿದ್ದ ಜನರಿಗೂ ಅಚ್ಚರಿ ಮೂಡಿಸಿದ್ದಾನೆ. ಆ ವೇಳೆ ಸಿದ್ದರಾಮಯ್ಯ ಅವರ ಸುತ್ತಲು ಇದ್ದ ಮುಖಂಡರು ತಕ್ಷಣ ಎಚ್ಚೆತ್ತು ಯುವಕನನ್ನು ಅಲ್ಲಿಂದ ತೆರಳುವಂತೆ ಸೂಚಿಸಿದರು. ಸಿದ್ದರಾಮಯ್ಯ ಅವರ ಪರ ಘೋಷಣೆ ಕೂಗುತ್ತಾ ಯುವಕ ಅಲ್ಲಿಂದ ತೆರಳಿದ್ದಾನೆ.





