ಛತ್ತೀಸ್‌ಗಢ: ನಕ್ಸಲರಿಂದ ಐಇಡಿ ಬಾಂಬ್ ಸ್ಫೋಟ; ಯೋಧನಿಗೆ ಗಾಯ
ರಾಯ್‌ಪುರ, ಎ.18: ಗುರುವಾರ ನಡೆದ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನದ ಸಂದರ್ಭ ಛತ್ತೀಸ್‌ಗಢದ ರಾಜ್‌ನಂದಾಗಾಂವ್ ಜಿಲ್ಲೆಯಲ್ಲಿ ಮತ್ತೆ ನಕ್ಸಲರು ಅಟ್ಟಹಾಸ ಮೆರೆದಿದ್ದು, ಸುಧಾರಿತ ಸ್ಫೋಟಕ ಸಾಧನ (ಐಇಡಿ)ಬಳಸಿ ಬಾಂಬ್ ಸ್ಫೋಟಿಸಿದ್ದಾರೆ.
ಘಟನೆಯಲ್ಲಿ ಇಂಡೊ ಟಿಬೆಟನ್ ಬೋರ್ಡರ್ ಪೊಲೀಸ್(ಐಟಿಬಿಪಿ) ಪಡೆಯ ಯೋಧ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನ್‌ಪುರ - ಮೊಹ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೇಧಾ ಮತ್ತು ದಬ್ಬಾ ಗ್ರಾಮಗಳ ಮಧ್ಯೆ ಐಟಿಬಿಪಿ ಪಡೆ ಗಸ್ತು ತಿರುಗುತ್ತಿದ್ದಾಗ ನಕ್ಸಲರು ಸುಧಾರಿತ ಸ್ಫೋಟಕ ಸಾಧನದಿಂದ ಬಾಂಬ್ ಸ್ಫೋಟಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್‌ನಂದಾಗಾಂವ್ ಲೋಕಸಭಾ ಕ್ಷೇತ್ರದಲ್ಲಿ ನಕ್ಸಲ್ ಹಾವಳಿ ಹೆಚ್ಚಿರುವ ಮನ್‌ಪುರ-ಮೊಹ್ಲಾ ಪ್ರದೇಶದಲ್ಲಿ ಮತದಾನದ ಅವಧಿಯನ್ನು ಬೆಳಿಗ್ಗೆ 7ರಿಂದ ಮಧ್ಯಾಹ್ನ 3ರವರೆಗೆ ನಿಗದಿಗೊಳಿಸಲಾಗಿದೆ.
ಉಳಿದ 7 ಪ್ರದೇಶಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಛತ್ತೀಸ್‌ಗಢದ ರಾಜ್‌ನಂದಾಗಾಂವ್, ಕಂಕೇರ್ ಮತ್ತು ಮಹಾಸಮುಂದ್ ಈ ಮೂರು ಲೋಕಸಭಾ ಕ್ಷೇತ್ರಗಳಲ್ಲಿ 60 ಸಾವಿರ ಭದ್ರತಾ ಸಿಬ್ಬಂದಿ ಹಾಗೂ ಡ್ರೋಣ್ ಕಣ್ಗಾವಲು ವ್ಯವಸ್ಥೆಯ ಸಹಿತ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.





