ಆರೆಸ್ಸೆಸ್ ವಿರುದ್ಧದ ಹೇಳಿಕೆ ಕೈಬಿಡಿ ಎಂದ ಸಮಿತಿ: ದೂರದರ್ಶನಕ್ಕೆ ಚುನಾವಣಾ ಭಾಷಣ ನೀಡಲು ನಿರಾಕರಿಸಿದ ಸಿಪಿಐ ಸಂಸದ
ಹೊಸದಿಲ್ಲಿ, ಎ.19: ಆರೆಸ್ಸೆಸ್ ಬಗ್ಗೆ ಉಲ್ಲೇಖವಿರುವ ತಮ್ಮ ಭಾಷಣದ ಒಂದು ಭಾಗವನ್ನು ತೆಗೆದು ಹಾಕುವಂತೆ ಹೇಳಿದ್ದನ್ನು ವಿರೋಧಿಸಿ ದೂರದರ್ಶನಕ್ಕಾಗಿ ತಮ್ಮ ಚುನಾವಣಾ ಭಾಷಣವನ್ನು ರೆಕಾರ್ಡಿಂಗ್ ನಡೆಸಲು ಸಿಪಿಐ ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಕೇರಳ ಸಚಿವ ಬಿನೊಯ್ ವಿಶ್ವಂ ನಿರಾಕರಿಸಿದ್ದಾರೆ.
ದೂರದರ್ಶನವು ಆಡಳಿತ ಪಕ್ಷದ ಅಣತಿಯಂತೆ ಕಾರ್ಯಾಚರಿಸುತ್ತಿದೆ ಹಾಗೂ ವಿಪಕ್ಷ ನಾಯಕರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ನೀಡುತ್ತಿಲ್ಲ ಎಂದು ವಿಶ್ವಂ ಆರೋಪಿಸಿದ್ದಾರೆ.
ಎಪ್ರಿಲ್ 26ರಂದು ಪ್ರಸಾರವಾಗಬೇಕಿದ್ದ ಅವರ ಭಾಷಣದ ರೆಕಾರ್ಡಿಂಗ್ ಗುರುವಾರ ನಡೆಯಬೇಕಿತ್ತು. ತಮ್ಮ ಭಾಷಣದ ಪ್ರತಿಯನ್ನು ಅವರು ಕಳೆದ ವಾರವೇ ದೂರದರ್ಶನಕ್ಕೆ ನೀಡಿದ್ದರಲ್ಲದೆ ಅದಕ್ಕೆ ಯಾವುದೇ ತಿದ್ದುಪಡಿ ಕುರಿತಂತೆ ಪ್ರಸಾರ ಭಾರತಿ ಏನನ್ನೂ ಹೇಳಿರಲಿಲ್ಲ. ಆದರೆ ಗುರುವಾರ ಅವರ ಭಾಷಣದ ರೆಕಾರ್ಡಿಂಗ್ ಗಾಗಿ ದೂರದರ್ಶನ ಸ್ಟುಡಿಯೋಗೆ ಆಗಮಿಸಿದಾಗ ಒಂದು ಭಾಗ ಬಿಟ್ಟು ಬಿಡುವಂತೆ ಅವರಿಗೆ ಹೇಳಲಾಗಿತ್ತು.
“ಆರೆಸ್ಸೆಸ್ ಪ್ರಚುರಪಡಿಸುವ ಜನಾಂಗೀಯ ಅಧಿಪತ್ಯದ ಸಿದ್ಧಾಂತವನ್ನು ಎನ್ ಡಿಎ ಸರಕಾರ ಅನುಸರಿಸುತ್ತಿದೆ ಹಾಗೂ ಈ ಸಿದ್ಧಾಂತವನ್ನು ಹಿಟ್ಲರ್ ಮತ್ತು ಮುಸ್ಸೊಲಿನಿಯಿಂದ ಎರವಲು ಪಡೆದುಕೊಳ್ಳಲಾಗಿದೆ'' ಎಂಬರ್ಥದ ಹೇಳಿಕೆ ದೂರದರ್ಶನದ ಭಾಷಣ ಪರಿಶೀಲನಾ ಸಮಿತಿಗೆ ಇಷ್ಟವಾಗಿರಲಿಲ್ಲ. ಭಾಷಣದ ಈ ನಿರ್ದಿಷ್ಟ ಭಾಗ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂದು ಸಮಿತಿ ಹೇಳಿತ್ತೆನ್ನಲಾಗಿದೆ.
ದೂರದರ್ಶನಕ್ಕೂ ಈ ವಿವಾದಕ್ಕೂ ಸಂಬಂಧವಿಲ್ಲ, ತಜ್ಞರಿರುವ ಭಾಷಣ ಪರಿಶೀಲನಾ ಸಮಿತಿಯೇ ಅವರ ಭಾಷಣದ ಪ್ರತಿಯನ್ನು ಪರಿಶೀಲಿಸಿದೆ ಎಂದು ಪ್ರಸಾರ ಭಾರತಿ ಸಿಇಒ ಶಶಿ ಶೇಖರ್ ವೆಂಪತಿ ತಿಳಿಸಿದ್ದಾರೆ.