ಕೇರಳದ ಈ ಅಭ್ಯರ್ಥಿ ಪರ ಪ್ರಚಾರದಲ್ಲಿ ಗುಜರಾತ್ ಹತ್ಯಾಕಾಂಡದ ಭೀಕರತೆ ತೆರೆದಿಟ್ಟ ಮುಖಗಳು
ತಿರುವನಂತಪುರಂ, ಎ.19: ಅವರಿಬ್ಬರು 2002ರ ಗುಜರಾತ್ ಹತ್ಯಾಕಾಂಡದ ವೇಳೆ ಪರಸ್ಪರ ವೈರುದ್ಧ್ಯದ ಚಿಹ್ನೆಗಳಾಗಿದ್ದರು. ವೃತ್ತಿಯಲ್ಲಿ ಟೈಲರ್ ಆಗಿರುವ 33 ವರ್ಷದ ಕುತ್ಬುದ್ದೀನ್ ಅನ್ಸಾರಿ ಅಹ್ಮದಾಬಾದ್ ನ ನರೋಡಾ ಪಾಟಿಯಾದಲ್ಲಿ ಕೋಮು ದಳ್ಳುರಿ ಪರಾಕಾಷ್ಠೆ ತಲುಪಿದ್ದ ಸಂದರ್ಭ ಅಲ್ಲಿದ್ದ ಕ್ಷಿಪ್ರ ಕಾರ್ಯಾಚರಣೆ ಪಡೆಯ ಸಿಬ್ಬಂದಿಯ ಬಳಿ ತನ್ನನ್ನು ಮನೆಯಿಂದ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯವಂತೆ ಅಂಗಲಾಚುತ್ತಿರುವ ಫೋಟೋ ಸಾಕಷ್ಟು ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದರೆ, 43 ವರ್ಷದ ಅಹ್ಮದಾಬಾದ್ ನಿವಾಸಿ, ವೃತಿಯಲ್ಲಿ ಚಮ್ಮಾರನಾಗಿರುವ ಅಶೋಕ್ ಮೋಚಿ, ಉದ್ರಿಕ್ತ ಗುಂಪುಗಳು ಮುಸ್ಲಿಮರ ಮೇಲೆ ದಾಳಿ ನಡೆಸುತ್ತಿದ್ದಂತಹ ಸಂದರ್ಭದಲ್ಲಿ ಕೈಯಲ್ಲಿ ಕಬ್ಬಿಣದ ಸಲಾಕೆ ಹಾಗೂ ಕೇಸರಿ ಹಣೆಪಟ್ಟಿ ಕಟ್ಟಿ ಆಕ್ರೋಶಭರಿತನಾಗಿ ಕಾಣುತ್ತಿದ್ದ ಚಿತ್ರವೂ ಹಲವು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿತ್ತು.
ಇದೀಗ 17 ವರ್ಷಗಳ ನಂತರ ಈ ಇಬ್ಬರೂ ಉತ್ತರ ಕೇರಳದ ವಡಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಿಪಿಎಂ ಅಭ್ಯರ್ಥಿ ಪಿ. ಜಯರಾಜನ್ ಪರ ಪ್ರಚಾರ ಮಾಡುತ್ತಿದ್ದಾರೆ.
ಈ ಇಬ್ಬರ 17 ವರ್ಷ ಹಳೆಯದಾದ ಫೋಟೋಗಳನ್ನು ರಾಜಕೀಯ ಪಕ್ಷಗಳು ಹಲವು ರಾಜ್ಯಗಳ ಚುನಾವಣೆಗಳಲ್ಲಿ ಬಳಸಿಕೊಂಡಿದ್ದರೂ ಇದೇ ಮೊದಲ ಬಾರಿ ಚುನಾವಣಾ ಪ್ರಚಾರದಲ್ಲಿ ಅವರು ಕಾಣಿಸಿಕೊಂಡಿದ್ದು ಜಯರಾಜನ್ ಪರವಾಗಿ ಭಾಷಣಗಳನ್ನು ನೀಡುತ್ತಾ, ಅವರ ಕಾರ್ಯಕ್ರಮಗಳಲ್ಲಿ ಕಳೆದೆರಡು ದಿನಗಳಿಂದ ಅವರು ಭಾಗವಹಿಸುತ್ತಿದ್ದಾರೆ.
ಮತೀಯ ಮತ್ತು ರಾಜಕೀಯ ಕಲಹಗಳ ಇತಿಹಾಸವಿರುವ ವಡಗರ ಕ್ಷೇತ್ರದ ನಾದಪುರಂ ಎಂಬಲ್ಲಿ ಅವರಿಬ್ಬರು ರ್ಯಾಲಿಗಳಲ್ಲಿ ಭಾಗವಹಿಸಿದ್ದರು.
ನಾದಪುರಂ ಸಮೀಪದ ಭೂಮಿವತ್ತುಕ್ಕಳ್ ಗ್ರಾಮದಲ್ಲಿ ಮಾತನಾಡಿದ ಅನ್ಸಾರಿ, ದೇಶವನ್ನಾಳುತ್ತಿರುವವರು ಗುಜರಾತ್ ನಿಂದ ಬಂದವರು. ಕಳೆದ ಐದು ವರ್ಷಗಳಲ್ಲಿ ಜನರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ದೂರದ ಗುಜರಾತ್ ನವರಾದ ನಮ್ಮ ಬಗ್ಗೆ ಜಯರಾಜನ್ ಅವರಿಗೆ ಇಷ್ಟೊಂದು ಕಾಳಜಿಯಿರಬೇಕಾದರೆ ಅವರೆದುರು ಇರುವ ಜನರ ಬಗ್ಗೆ ಅವರಿಗೆಷ್ಟು ಕಾಳಜಿ ಇರಬೇಕಿಲ್ಲ?,'' ಎಂದರು.
ಅಶೋಕ್ ಮೋಚಿ ಮಾತನಾಡಿ, “ದೇಶಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಳ್ಳೆಯದಲ್ಲ. ಎರಡೂ ಪಕ್ಷಗಳೂ ಬಡವರ ವಿರುದ್ಧವಾಗಿವೆ. ಸಿಪಿಎಂ ಮಾತ್ರ ಬಡವರ ಮತ್ತು ರೈತರ ಕಾಳಜಿಯಿರುವ ಪಕ್ಷ” ಎಂದರು.
“ನನಗೆ ಅನ್ಸಾರಿ ಮತ್ತು ಅಶೋಕ್ 2014ರಿಂದ ಪರಿಚಿತರು, ನಾನು ಚುನಾವಣೆ ಸ್ಪರ್ಧಿಸುತ್ತಿದ್ದೇನೆಂದು ತಿಳಿದು ಅವರು ವಿಷು ಸಂದರ್ಭ ನಮ್ಮ ಮನೆಗೆ ಬಂದಿದ್ದರು” ಎಂದು ಜಯರಾಜನ್ ಹೇಳಿದರು.