ರಾಯಲ್ ಸೊಸೈಟಿ ಫೆಲೋ ಆಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಗಗನದೀಪ್ ಕಾಂಗ್
ಹೊಸದಿಲ್ಲಿ,ಎ.19: ಜೀವಶಾಸ್ತ್ರಜ್ಞೆ ಗಗನದೀಪ್ ಕಾಂಗ್ ಅವರು ಈ ವಾರ ಬ್ರಿಟನ್ನಿನ ಮುಖ್ಯ ಮತ್ತು ಪ್ರತಿಷ್ಠಿತ ವಿಜ್ಞಾನ ಅಕಾಡಮಿ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆಯಾಗಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ವೆಲ್ಲೂರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಕಾಂಗ್(೫೭) ಹಾಲಿ ಅಧ್ಯಯನ ರಜೆಯಲ್ಲಿದ್ದು, ಫರೀದಾಬಾದ್ನ ಟ್ರಾನ್ಸ್ಲೇಷನಲ್ ಹೆಲ್ತ್ ಆ್ಯಂಡ್ ಟೆಕ್ನಾಲಜಿ ಇನ್ಸ್ಟಿಟ್ಯೂಟ್ನ ಕಾರ್ಯಕಾರಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಭಾರತದಲ್ಲಿ ಮಕ್ಕಳಲ್ಲಿ ಕರುಳಿನ ಸೋಂಕುಗಳ ಪ್ರಸರಣ,ಅಭಿವೃದ್ಧಿ ಮತ್ತು ತಡೆಯ ಕುರಿತು ಕಾಂಗ್ ಅಧ್ಯಯನ ನಡೆಸುತ್ತಿದ್ದಾರೆ. ಕ್ಲಿನಿಕಲ್ ಟ್ರಾನ್ಸ್ಲೇಷನಲ್ ಮೆಡಿಸಿನ್ನಲ್ಲಿ ವಿದ್ಯಾರ್ಥಿಗಳಿಗಾಗಿ ಅತ್ಯುತ್ತಮ ತರಬೇತಿ ಕಾರ್ಯಕ್ರಮಗಳನ್ನು ಅವರು ರೂಪಿಸಿದ್ದಾರೆ ಎಂದು ರಾಯಲ್ ಸೊಸೈಟಿಯು ಹೇಳಿದೆ.
ವಿಜ್ಞಾನಕ್ಕೆ ತಮ್ಮ ಮಹತ್ತರ ಕೊಡುಗೆಗಳಿಗಾಗಿ ಕಾಂಗ್ ಜೊತೆ ಇತರ ೫೦ ಜನರನ್ನು ಫೆಲೋಗಳನ್ನಾಗಿ,೧೦ ಜನರನ್ನು ವಿದೇಶಿ ಸದಸ್ಯರಾಗಿ ಮತ್ತು ಓರ್ವರನ್ನು ಹಾನರರಿ ಫೆಲೋ ಆಗಿ ಸೊಸೈಟಿಯು ಆಯ್ಕೆ ಮಾಡಿದೆ. ಈ ಆಯ್ಕೆಗಳನ್ನು ಎ.16ರಂದು ಪ್ರಕಟಿಸಲಾಗಿತ್ತು.