ದಿನಪತ್ರಿಕೆಯ 4 ಪುಟಗಳಲ್ಲಿ ಬಿಜೆಪಿ ಅಭ್ಯರ್ಥಿಯ ಕ್ರಿಮಿನಲ್ ಪ್ರಕರಣಗಳು ಪ್ರಕಟ !
ತಿರುವನಂತಪುರ, ಎ. 18: ‘ಜನ್ಮಭೂಮಿ’ ದಿನಪತ್ರಿಕೆಯ ಪತ್ತನಂತಿಟ್ಟ ಆವೃತ್ತಿಯ ಗುರುವಾರದ ಸಂಚಿಕೆಯಲ್ಲಿ ನಾಲ್ಕು ಪುಟಗಳ ಜಾಹೀರಾತು ಪ್ರಕಟವಾಗಿದೆ. ಆದರೆ, ಇದು ಯಾವುದೇ ಉತ್ಪನ್ನ, ಸೇವೆ ಅಥವಾ ಸರಕಾರದ ಟೆಂಡರ್ ನೋಟಿಸ್ನ ಜಾಹೀರಾತು ಆಗಿರದೆ, ಪತ್ತನಂತಿಟ್ಟ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಪಟ್ಟಿಯಾಗಿದೆ.
ಚುನಾವಣಾ ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಆರೋಪಗಳ ಪಟ್ಟಿಯನ್ನು ದಿನಪತ್ರಿಕೆಯಲ್ಲಿ ಪ್ರಕಟಿಸುವುದನ್ನು ಚುನಾವಣಾ ಆಯೋಗ ಕಡ್ಡಾಯಗೊಳಿಸಿದೆ. ಆದುದರಿಂದ ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಪ್ರಕರಣಗಳ ವಿವರಗಳನ್ನು ಮೂರು ಪ್ರಮುಖ ದಿನಪತ್ರಿಕೆಗಳಲ್ಲಿ ಅಥವಾ ಒಂದೇ ದಿನಪತ್ರಿಕೆಗಳಲ್ಲಿ ಮೂರು ಬಾರಿ ಪ್ರಕಟಿಸಬೇಕು. ಮತದಾನ ಮಾಡುವುದಕ್ಕಿಂತ ಮುನ್ನ ಮತದಾರರು ಜಾಗೃತರಾಗಬೇಕು ಎಂಬುದು ಇದರ ಉದ್ದೇಶ.
ಕೇರಳದಲ್ಲಿ ಬಿಜೆಪಿಯ ಮುಖವಾಣಿಯಾಗಿರುವ ‘ಜನ್ಮಭೂಮಿ’ ದಿನಪತ್ರಿಕೆಯಲ್ಲಿ ಕೆ. ಸುರೇಂದ್ರನ್ ಅವರ 240 ಕ್ರಿಮಿನಲ್ ಪ್ರಕರಣಗಳ ವಿವರ ನೀಡುವ ನಾಲ್ಕು ಪುಟಗಳ ಜಾಹೀರಾತು ಪ್ರಕಟವಾಗಿದೆ. ಪತ್ರಿಕೆಯಲ್ಲಿ ಪ್ರಕಟವಾದ ಪ್ರಕರಣಗಳ ವಿವರದಂತೆ ಕೆ. ಸುರೇಂದ್ರನ್ ಅವರ ವಿರುದ್ಧ ಕೇರಳದ ಹೆಚ್ಚು ಕಡಿಮೆ ಎಲ್ಲ ಜಿಲ್ಲೆಗಳಲ್ಲೂ ಪ್ರಕರಣ ದಾಖಲಾಗಿದೆ. ಮೇಲ್ನೋಟಕ್ಕೆ ಗಮನಿಸಿದರೆ ಇದರಲ್ಲಿ ಹೆಚ್ಚಿನ ಪ್ರಕರಣಗಳು ಶಬರಿಮಲೆ ವಿವಾದಕ್ಕೆ ಸಂಬಂಧಿಸಿದ್ದು.
ಜನ್ಮಭೂಮಿ ದಿನಪತ್ರಿಕೆ ಪ್ರಕಟಿಸಿದ ವಿವರದ ಪ್ರಕಾರ ಕೆ. ಸುರೇಂದ್ರನ್ ಅವರ ವಿರುದ್ಧ ಜಿಲ್ಲೆಗಳಾದ ಕೊಲ್ಲಂ 68, ತಿರುವನಂತಪುರದಲ್ಲಿ 3, ಪತ್ತನಂತಿಟ್ಟದಲ್ಲಿ 30, ಆಲಪ್ಪುಳದಲ್ಲಿ 56, ಕೊಟ್ಟಾಯಂನಲ್ಲಿ 8, ಇಡುಕ್ಕಿಯಲ್ಲಿ 17, ಎರ್ನಾಕುಳಂನಲ್ಲಿ 13, ತ್ರಿಶೂರ್ನಲ್ಲಿ 6, ಕೋಝಿಕ್ಕೋಡ್ನಲ್ಲಿ 2, ಕಾಸರಗೋಡಿನಲ್ಲಿ 33, ಮಲಪ್ಪುರಂ, ವಯನಾಡ್ ಹಾಗೂ ಕಣ್ಣೂರಿನಲ್ಲಿ ತಲಾ 1 ಪ್ರಕರಣ ದಾಖಲಾಗಿದೆ.