ಐಎಎಸ್ ಅಧಿಕಾರಿಯ ಅಮಾನತು ವಿರುದ್ಧ ಮಾಜಿ ಮುಖ್ಯ ಚುನಾವಣಾ ಆಯುಕ್ತರ ಆಕ್ರೋಶ
ಪ್ರಧಾನಿಯ ಹೆಲಿಕಾಪ್ಟರ್ ತಪಾಸಣೆ
ಹೊಸದಿಲ್ಲಿ, ಎ. 18: ಒಡಿಶಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಅನ್ನು ತಪಾಸಣೆ ಮಾಡಿದ ಐಎಎಸ್ ಅಧಿಕಾರಿಯನ್ನು ಅಮಾನತುಗೊಳಿಸಿದ ಚುನಾವಣಾ ಆಯೋಗದ ಕ್ರಮವನ್ನು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೈಷಿ ‘ದುರದೃಷ್ಟಕರ’ ಎಂದು ಬಣ್ಣಿಸಿದ್ದಾರೆ.
ಚುನಾವಣಾ ಆಯೋಗದ ವರ್ಚಸ್ಸನ್ನು ಮಾತ್ರವಲ್ಲದೆ ಪ್ರಧಾನಿ ಮೋದಿ ಅವರ ವರ್ಚಸ್ಸನ್ನು ಕೂಡ ಮರು ಸ್ಥಾಪಿಸುವ ಅವಕಾಶವನ್ನು ಅವರು ಕಳೆದುಕೊಂಡಿದ್ದಾರೆ ಎಂದು ಖುರೇಷಿ ವ್ಯಾಖ್ಯಾನಿಸಿದ್ದಾರೆ. ಚುನಾವಣಾ ಆಯೋಗ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾರ್ವಜನಿಕರು ಗಮನಿಸುತ್ತಿದ್ದಾರೆ. ಪ್ರಧಾನಿ ಅವರು ಮತ್ತೆ ಮತ್ತೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ. ಚುನಾವಣಾ ಆಯೋಗ ಅದನ್ನು ಗಮನಿಸುವಲ್ಲಿ ವಿಫಲವಾಗುತ್ತಿದೆ ಎಂದು ಖುರೈಷಿ ಕಟುವಾದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಧಾನಿ ಮಂತ್ರಿ ಹೆಲಿಕಾಪ್ಟರ್ನ ತಪಾಸಣೆಯನ್ನು ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದನ್ನು ತೋರಿಸಲು ಬಳಸಬಹುದಿತ್ತು. ಚುನಾವಣಾ ಆಯೋಗ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ತೀವ್ರ ಟೀಕೆಯನ್ನು ಒಂದೇ ಏಟಿಗೆ ಹತ್ತಿಕ್ಕಬಹುದಿತ್ತು. ಆದರೆ, ಚುನಾವಣಾ ಆಯೋಗ ಬೇರೆ ದಾರಿ ಕಂಡು ಕೊಂಡಿತು. ಇದರಿಂದ ಟೀಕೆಗಳು ಇನ್ನಷ್ಟು ತೀವ್ರಗೊಂಡಿವೆ ಎಂದು ಖುರೈಷಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಎಪ್ರಿಲ್ 16ರಂದು ಒಡಿಶಾದ ಸಾಂಬಾಲ್ಪುರಕ್ಕೆ ಭೇಟಿ ನೀಡಿದ ಸಂದರ್ಭ ಅವರ ಹೆಲಿಕಾಪ್ಟರ್ ಅನ್ನು ಸಂಬಂಧಿತ ಅಧಿಕಾರಿ ಮುಹಮ್ಮದ್ ಮೊಹ್ಸಿನ್ ತಪಾಸಣೆ ನಡೆಸಿದ್ದರು. ಈ ಶೋಧ ಕಾರ್ಯಾಚರಣೆಯಿಂದ ಪ್ರಧಾನಿ ಅವರ ನಿಗದಿತ ಕಾರ್ಯಕ್ರಮಕ್ಕೆ ತೆರಳಲು 20 ನಿಮಿಷ ವಿಳಂಬವಾಗಿತ್ತು. ಅನಂತರ ಕರ್ತವ್ಯ ಲೋಪದ ಆರೋಪದಲ್ಲಿ ಮೊಹ್ಸಿನ್ ಅವರನ್ನು ವಜಾಗೊಳಿಸಲಾಗಿತ್ತು.