ಕಬ್ಬಿಣ ಕಾಯಿಸಿ ಮುಸ್ಲಿಂ ಯುವಕನ ಬೆನ್ನಿಗೆ ‘ಓಂ’ ಎಂದು ಬರೆ ಹಾಕಿದ ತಿಹಾರ್ ಜೈಲು ಅಧಿಕಾರಿಗಳು: ಆರೋಪ
“2 ದಿನ ಊಟ ನೀಡದೆ ಚಿತ್ರಹಿಂಸೆ”
ಹೊಸದಿಲ್ಲಿ,ಎ.19: ತಿಹಾರ ಜೈಲಿನಲ್ಲಿ ಕೊಳೆಯುತ್ತಿರುವ ಮುಸ್ಲಿಂ ವಿಚಾರಣಾಧೀನ ಕೈದಿಗೆ ಜೈಲು ಅಧೀಕ್ಷಕರು ಓಂ ಚಿಹ್ನೆಯ ಬರೆ ಹಾಕಿರುವ ಘಟನೆಯ ಬಗ್ಗೆ ವಿಚಾರಣೆನಡೆಸುವಂತೆ ದಿಲ್ಲಿಯ ನ್ಯಾಯಾಲಯವೊಂದು ಆದೇಶಿಸಿದೆ.
ಎ.12ರಂದು ತನಗೆ ಓಂ ಚಿಹ್ನೆಯ ಬರೆ ಹಾಕಲಾಗಿತ್ತು ಮತ್ತು ಎರಡು ದಿನಗಳ ಕಾಲ ಅನ್ನಾಹಾರ ನೀಡಿರಲಿಲ್ಲ. ಜೈಲು ಅಧೀಕ್ಷಕ ರಾಜೇಶ ಚೌಹಾಣ್ ಅವರು ತನ್ನನ್ನುಕ್ರೂರ ಮತ್ತು ಅಮಾನವೀಯವಾಗಿ ನಡೆಸಿಕೊಂಡಿದ್ದರು ಎಂದು ಕೈದಿ ನಬ್ಬೀರ್ ತನ್ನ ಕುಟುಂಬಕ್ಕೆ ತಿಳಿಸಿದ್ದರು. ಕುಟುಂಬ ಸದಸ್ಯರು ಈ ಬಗ್ಗೆ ವಕೀಲರ ಮೂಲಕನ್ಯಾಯಾಲಯಕ್ಕೆ ದೂರು ಅರ್ಜಿ ಸಲ್ಲಿಸಿದ್ದರು.
ನಬ್ಬೀರ್ನ ಸುಟ್ಟಗಾಯಗಳನ್ನು ನ್ಯಾಯಾಲಯವು ಪರಿಶೀಲಿಸಿದ್ದು,ಓಂ ಚಿಹ್ನೆಯನ್ನು ತೋರಿಸುವ ಚಿತ್ರಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
ಅರ್ಜಿದಾರರು ಮಾಡಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ ಮತ್ತು ತಕ್ಷಣ ಮಧ್ಯಪ್ರವೇಶದ ಅಗತ್ಯವಿದೆ ಎಂದು ಹೇಳಿದ ನ್ಯಾಯಾಲಯವು,ನಬ್ಬೀರ್ನನ್ನುತಕ್ಷಣ ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಮತ್ತು ಘಟನೆಯ ಬಗ್ಗೆ ವಿಚಾರಣೆ ನಡೆಸುವಂತೆ ಆದೇಶಿಸಿದೆ. ಅಗತ್ಯ ಸಿಸಿಟಿವಿ ತುಣುಕುಗಳು ಮತ್ತು ಸಹಕೈದಿಗಳಹೇಳಿಕೆಗಳನ್ನು ಸಂಗ್ರಹಿಸುವಂತೆಯೂ ಅದು ಸೂಚಿಸಿದೆ. ಜೈಲಿನಲ್ಲಿ ಕೈದಿಯ ಸುರಕ್ಷತೆಯನ್ನು ಖಚಿತಪಡಿಸಲು ಅಗತ್ಯ ವ್ಯವಸ್ಥೆ ಮಾಡುವಂತೆ ಮತ್ತು ಆತನನ್ನು ಜೈಲುಅಧೀಕ್ಷಕರ ನೇರ ಅಥವಾ ಪರೋಕ್ಷ ಉಸ್ತುವಾರಿಯಿಂದ ತಕ್ಷಣವೇ ಹೊರಗಿರಿಸುವಂತೆಯೂ ನ್ಯಾಯಾಲಯವು ಆದೇಶಿಸಿದೆ.
ನ್ಯಾಯಾಲಯವು ಬುಧವಾರ ಈ ಆದೇಶವನ್ನು ಹೊರಡಿಸಿದ್ದು,ಗುರುವಾರ ವರದಿಯನ್ನು ಸಲ್ಲಿಸುವಂತೆ ಸೂಚಿಸಿತ್ತು. ವರದಿಯನ್ನು ಸಲ್ಲಿಸಲಾಗಿದೆಯೇ ಇಲ್ಲವೇಎನ್ನುವುದು ಸ್ಪಷ್ಟವಾಗಿಲ್ಲ.
ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳಿಗೆ ಚಿತ್ರಹಿಂಸೆ ಅಥವಾ ಕಿರುಕುಳಗಳನ್ನು ನೀಡುತ್ತಿರುವ ಹಲವಾರು ವರದಿಗಳಿವೆ. ಸಿಮಿಗೆ ಸೇರಿದ 21 ವಿಚಾರಣಾಧೀನಕೈದಿಗಳಿಗೆ ಅವರ ಧರ್ಮದ ಆಧಾರದಲ್ಲಿ ಚಿತ್ರಹಿಂಸೆ ಮತ್ತು ಕಿರುಕುಳಗಳನ್ನು ನೀಡಲಾಗಿತ್ತು,ಹಲ್ಲೆಗಳನ್ನು ನಡೆಸಲಾಗಿತ್ತು ಮತ್ತು ಅವರಿಗ ವೈದ್ಯಕೀಯ ಚಿಕಿತ್ಸೆಯನ್ನುನಿರಾಕರಿಸಲಾಗಿತ್ತು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕಳೆದ ವರ್ಷದ ಎಪ್ರಿಲ್ನಲ್ಲಿ ಹೇಳಿತ್ತು.