ಹಳಿತಪ್ಪಿದ ಪೂರ್ವಾ ಎಕ್ಸ್ಪ್ರೆಸ್: 13 ಮಂದಿಗೆ ಗಾಯ
ಲಕ್ನೋ, ಎ.20: ದಿಲ್ಲಿಗೆ ಹೊರಟಿದ್ದ ಪೂರ್ವಾ ಎಕ್ಸ್ಪ್ರೆಸ್ ರೈಲಿನ 12 ಬೋಗಿಗಳು ಶನಿವಾರ ನಸುಕಿಗೆ ಮುನ್ನ ಹಳಿ ತಪ್ಪಿದ್ದು, ಘಟನೆಯಲ್ಲಿ ಕನಿಷ್ಠ 13 ಮಂದಿ ಗಾಯಗೊಂಡಿದ್ದಾರೆ. ಕಾನ್ಪುರ ನಗರದ ಮಹಾರಾಜಪುರ ಪೊಲೀಸ್ ಠಾಣೆ ವ್ಯಾಪ್ತಿಯ ರುಮಾ ರೈಲು ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಯಾರೂ ಮೃತಪಟ್ಟಿರುವುದು ವರದಿಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಹಳಿ ತಪ್ಪಿದ 12 ಬೋಗಿಗಳ ಪೈಕಿ 4 ಬುಡಮೇಲಾಗಿವೆ. ಹೌರಾದಿಂದ ಹೊಸದಿಲ್ಲಿಗೆ ತೆರಳುತ್ತಿದ್ದ ರೈಲು (ರೈಲು ಸಂಖ್ಯೆ 12303) ರುಮಾ ಕೈಗಾರಿಕಾ ಪ್ರದೇಶದ ಬಳಿ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಒಂದು ಹವಾನಿಯಂತ್ರಿತ ಬೋಗಿ ಸೇರಿದಂತೆ ನಾಲ್ಕು ಬೋಗಿಗಳು ಮಗುಚಿಕೊಂಡಿವೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆನಂದ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ಸ್ಪಂದನ ಪಡೆಯ 45 ಯೋಧರನ್ನೊಳಗೊಂಡ ತಂಡ ಸ್ಥಳಕ್ಕೆ ಆಗಮಿಸಿದ್ದು, ಸಮರೋಪಾದಿ ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳನ್ನು ಹಲೆಟ್ ಮತ್ತು ಕಾನ್ಶಿರಾಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಯಾಗದಿಂದ ಘಟನಾ ಸ್ಥಳಕ್ಕೆ ಪರಿಹಾರ ರೈಲು ಬರುತ್ತಿದೆ. ಕಾನ್ಪುರ ಕೇಂದ್ರ ರೈಲು ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆದೊಯ್ಯಲು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ವ್ಯವಸ್ಥಾಪಕ ವಿಜಯ್ ವಿಶ್ವಾಸ್ ಪಂತ್ ಹೇಳಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ 13 ರೈಲುಗಳನ್ನು ಬೇರೆ ಮಾರ್ಗದಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದ್ದು, ಒಂದು ರೈಲು ರದ್ದಾಗಿದೆ.