ನಾನು ಇಂದಿರಾ ಗಾಂಧಿ ಅಲ್ಲ; ಆದರೆ ಅವರಂತೆ ದೇಶ ಸೇವೆ ಮಾಡುತ್ತೇನೆ: ಪ್ರಿಯಾಂಕಾ ಗಾಂಧಿ
ಕಾನ್ಪುರ, ಎ.20: "ಮಾಜಿ ಪ್ರಧಾನಿ, ದಿವಂಗತ ಇಂದಿರಾ ಗಾಂಧಿಯವರೊಂದಿಗೆ ನನ್ನನ್ನು ಹೋಲಿಕೆ ಮಾಡಬೇಡಿ; ಆದರೆ ದೇಶಕ್ಕೆ ಸೇವೆ ಸಲ್ಲಿಸುವ ಮೂಲಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತೇನೆ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಇಂದಿರಾ ಅವರ ಮೊಮ್ಮಗಳಾದ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಇಂದಿರಾ ಗಾಂಧಿ ಎದುರು ನಾನು ಏನೂ ಅಲ್ಲ; ಆದರೆ ದೇಶಕ್ಕೆ ಸೇವೆ ಸಲ್ಲಿಸುವ ಬಗ್ಗೆ ಅವರಿಗಿದ್ದ ಅಭಿಲಾಷೆ ನನ್ನ ಹಾಗೂ ಸಹೋದರ ರಾಹುಲ್ ಗಾಂಧಿಯವರ ಹೃದಯದಲ್ಲಿ ಜೀವಂತವಾಗಿದೆ. ಅದನ್ನು ಯಾರೂ ಅಳಿಸಲಾಗದು. ನೀವು ಅವಕಾಶ ಕೊಟ್ಟರೂ, ಕೊಡದಿದ್ದರೂ ನಮ್ಮ ಪಾಡಿಗೆ ನಾವು ಸೇವೆ ಮುಂದುವರಿಸುತ್ತೇವೆ" ಎಂದು ಕಾನ್ಪುರ ಕ್ಷೇತ್ರದ ಅಭ್ಯರ್ಥಿ ಶ್ರೀಪ್ರಕಾಶ್ ಜೈಸ್ವಾಲ್ ಅವರ ಪ್ರಚಾರಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಭಾವುಕರಾಗಿ ನುಡಿದರು.
"ಬಿಜೆಪಿಗೆ ಕಳಕಳಿ ಇರುವುದು ಸ್ವಂತ ಪ್ರಗತಿಯ ಬಗ್ಗೆ ಮಾತ್ರ; ದೇಶದ ಪ್ರಗತಿ ಬಗ್ಗೆ ಅಲ್ಲ. ಎರಡು ಬಗೆಯ ಸರ್ಕಾರಗಳಿರುತ್ತವೆ... ಒಂದು ಜನರಿಗಾಗಿ ಕೆಲಸ ಮಾಡುವ ಸರ್ಕಾರ, ಮತ್ತೊಂದು ಸ್ವಂತ ಪ್ರಗತಿ ಬಗ್ಗೆ ಕಾಳಜಿ ಹೊಂದಿದ ಸರ್ಕಾರ. ಬಿಜೆಪಿ ಸರ್ಕಾರದ್ದು ಆಡಂಬರ ಮತ್ತು ಪ್ರಚಾರ ಮಾತ್ರ" ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಸಶಸ್ತ್ರ ಪಡೆಗಳಿಗೆ ಜಾರಿಗೊಳಿಸಿರುವ ಸಮಾನ ಶ್ರೇಣಿ ಸಮಾನ ಪಿಂಚಣಿ ಯೋಜನೆ ಬಗ್ಗೆ ಪ್ರಸ್ತಾಪಿಸಿದ ಅವರು, "ಇದು ಸರ್ಕಾರ ಯೋಧರಿಗೆ ನೀಡಿದ ಉಡುಗೊರೆಯೇ ಅಥವಾ ಅವರ ಹಕ್ಕೇ?" ಎಂದು ಪ್ರಶ್ನಿಸಿದರು. ಸಶಸ್ತ್ರ ಪಡೆ ಯೋಧರ ಹಕ್ಕನ್ನು, ಸರ್ಕಾರ ಅವರಿಗೆ ತಾವು ನೀಡಿದ ಉಡುಗೊರೆ ಎಂಬಂತೆ ಬಿಂಬಿಸುತ್ತಿದೆ. ಈ ಮನೋಪ್ರವೃತ್ತಿಯನ್ನು ಯಾರು ಬದಲಿಸಬೇಕು? ಎಂದು ಪ್ರಶ್ನಿಸಿದರು.