ಹೃದಯಾಘಾತಕ್ಕೀಡಾದ ಚುನಾವಣಾಧಿಕಾರಿ: ಫೋನ್ ನಲ್ಲಿ ವೈದ್ಯರಿಂದ ಮಾಹಿತಿ ಪಡೆದು ಜೀವ ಉಳಿಸಿದ ಯೋಧ
ಶ್ರೀನಗರ, ಎ.20: ಸಿಆರ್ಪಿಎಫ್ ಯೋಧನೊಬ್ಬ ಹೃದಯಾಘಾತಕ್ಕೀಡಾದ ಕರ್ತವ್ಯನಿರತ ಚುನಾವಣಾ ಅಧಿಕಾರಿಯ ಜೀವ ಉಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗುರುವಾರ ಕಾಶ್ಮೀರದ ಬುಚ್ಪೋರಾದ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ. 28 ಬೆಟಾಲಿಯನ್ನ ಕಾನ್ಸ್ಸ್ಟೇಬಲ್ ಸುರಿಂದರ್ ಕುಮಾರ್ ಬೆಳಗ್ಗೆ 9ರ ಸುಮಾರಿಗೆ ತನ್ನ ಕರ್ತವ್ಯದಲ್ಲಿದ್ದ ಸಮಯದಲ್ಲಿ ಅಧಿಕಾರಿ ಅಹ್ಸಾನುಲ್ ಹಕ್ ಅನಾರೋಗ್ಯಕ್ಕೀಡಾದರು. ಆಗ ಅವರಿಗೆ ಕುಮಾರ್ ಪ್ರಥಮ ಚಿಕಿತ್ಸೆ ನೀಡಿದರು. ಆದಾಗ್ಯೂ ಕೆಲವೇ ನಿಮಿಷದಲ್ಲಿ ಹಕ್ ಪ್ರಜ್ಞಾಹೀನರಾದರು.
ರೆಡ್ ಕ್ರಾಸ್ ಸೊಸೈಟಿಯಲ್ಲಿ ತರಬೇತಿ ಪಡೆದಿರುವ ಕುಮಾರ್ ಗಂಭೀರ ಪರಿಸ್ಥಿತಿಯಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆನ್ನುವುದನ್ನು ಕಲಿತುಕೊಂಡಿದ್ದು ತುರ್ತು ಸಂಖ್ಯೆಗೆ ದೂರವಾಣಿ ಕರೆ ಮಾಡಿದರು. ಆದರೆ, ಯಾರೂ ನೆರವಿಗೆ ಧಾವಿಸಿ ಬರಲಿಲ್ಲ. ಆಗ ಅವರು ತನ್ನ ಬೆಟಾಲಿಯನ್ ನ ಹಿರಿಯ ವೈದ್ಯೆ ಡಾ. ಸುನೀದ್ ಖಾನ್ ಗೆ ಫೋನ್ ಮಾಡಿ ವಿಷಯ ತಿಳಿಸಿದರು. ಖಾನ್ ಇದು ಹೃದಯಾಘಾತವಾಗಿದ್ದು, ಮುಂದಿನ 45 ನಿಮಿಷಗಳ ಕಾಲ ತೀವ್ರ ನಿಗಾವಹಿಸುವಂತೆ ಫೋನ್ನಲ್ಲೇ ಸೂಚನೆ ನೀಡಿದರು. ಯೋಧ ಕುಮಾರ್ ವೈದ್ಯರ ಸೂಚನೆಯಂತೆಯೇ ನಡೆದುಕೊಂಡು ಹಕ್ ಜೀವ ಉಳಿಸಿದರು.
‘‘ಯೋಧ ಕುಮಾರ್ ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿಭಾಯಿಸಿದರು. ನನ್ನ ಸೂಚನೆಯನ್ನು ಅಷ್ಟೇ ಶ್ರದ್ಧೆಯಿಂದ ಪಾಲಿಸಿದರು’’ ಎಂದು ಡಾ.ಸುನೀದ್ ಖಾನ್ ಹೇಳಿದ್ದಾರೆ.
ಇದೇ ವೇಳೆ ಸುನೀದ್ ಖಾನ್ ಅವರು ಶೇರ್-ಈ-ಕಾಶ್ಮೀರದ ವೈದ್ಯಕೀಯ ಕಾಲೇಜಿಗೆ ಫೋನ್ ಕರೆ ಮಾಡಿ ಆ್ಯಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲಿಸಿದರು. ಸಮಯಕ್ಕೆ ಸರಿಯಾಗಿ ಸ್ಪಂದಿಸಿದ್ದರಿಂದ ಅಧಿಕಾರಿಯ ಜೀವ ಉಳಿದಿದೆ ಎಂದು ಸ್ಕಿಮ್ಸ್ ವೈದ್ಯರು ತಿಳಿಸಿದ್ದಾರೆ.