ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ವಿಚಾರಣೆ ನಡೆಸಿದ ಸಿಜೆಐ ನೇತೃತ್ವದ ವಿಶೇಷ ಕಲಾಪದಲ್ಲಿ ಏನಾಯಿತು ?
ಹೊಸದಿಲ್ಲಿ, ಎ.20: ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧ ಸುಪ್ರೀಂ ಕೋರ್ಟ್ ನ ಮಾಜಿ ಉದ್ಯೋಗಿಯೊಬ್ಬರು ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿ ತುರ್ತು ವಿಚಾರಣೆ ಸಿಜೆಐ ರಂಜನ್ ಗೊಗೊಯಿ ನೇತೃತ್ವದಲ್ಲಿ ನಡೆಯಿತು.
ಕಲಾಪದಲ್ಲಿ ಮಾತನಾಡಿದ ಸಿಜೆಐ ರಂಜನ್ ಗೊಗೊಯಿ ತನ್ನ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳನ್ನು ತಿರಸ್ಕರಿಸಿದರು. ‘‘ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆರೋಪಗಳಿಗೆ ಪ್ರತಿಕ್ರಿಯಿಸುವಷ್ಟು ಕೆಳಮಟ್ಟಕ್ಕೆ ಇಳಿಯಬೇಕೆಂದು ನನಗಸುತ್ತಿಲ್ಲ. ನಾನು ಈ ಕುರಿತು ಯಾವುದೇ ಆದೇಶ ನೀಡುವುದಿಲ್ಲ. ಹಿರಿಯ ನ್ಯಾಯಾಧೀಶ ಅರುಣ್ ಮಿಶ್ರಾ ಆದೇಶ ನೀಡುತ್ತಾರೆ. ನನ್ನ ಮೇಲಿನ ಆರೋಪದ ಹಿಂದೆ ದೊಡ್ಡ ಷಡ್ಯಂತ್ರವಿದೆ. ಮುಖ್ಯ ನ್ಯಾಯಾಧೀಶರ ಕಚೇರಿಯನ್ನು ನಿಷ್ಕ್ರಿಯಗೊಳಿಸುವುದಕ್ಕೆ ಅವರು ಬಯಸಿದ್ದಾರೆ. ಮುಂದಿನ ವಾರ ಹಲವು ಪ್ರಮುಖ, ಸೂಕ್ಷ್ಮ ಪ್ರಕರಣಗಳ ವಿಚಾರಣೆ ನಡೆಸಲಿರುವ ಕಾರಣ ನನ್ನ ವಿರುದ್ಧ ಆರೋಪಗಳನ್ನು ಹೊರಿಸಲಾಗುತ್ತಿದೆ. ನಾನು ಇದೇ ಪೀಠದಲ್ಲಿ ಕುಳಿತು ಯಾವುದೇ ಭಯವಿಲ್ಲದೇ ನನ್ನ ನ್ಯಾಯಾಂಗ ಕಾರ್ಯವನ್ನು ನಿಭಾಯಿಸುತ್ತೇನೆ...ನ್ಯಾಯಾಂಗವನ್ನು ಬಲಿಪಶು ಮಾಡಲು ಸಾಧ್ಯವಿಲ್ಲ’’ಎಂದು ಕಲಾಪದ ವೇಳೆ ಗೊಗೊಯಿ ಹೇಳಿದ್ದಾರೆ.
“20 ವರ್ಷಗಳ ಸೇವೆಯ ಬಳಿಕ ನನ್ನ ಬಳಿ ಬ್ಯಾಂಕ್ ಬ್ಯಾಲೆನ್ಸ್ 6.80 ಲಕ್ಷ ರೂ. ಇದೆ. ನನ್ನ ಪಿಯೊನ್ ಬಳಿ ನನಗಿಂತ ಹೆಚ್ಚು ಹಣವಿದೆ. ಈ ಆರೋಪ 20 ವರ್ಷಗಳ ಸೇವೆಗೆ ನನಗೆ ಲಭಿಸಿದ ಉಡುಗೊರೆಯೇ?. ನನ್ನ ಮೇಲೆ ಆರೋಪ ಹೊರಿಸಿರುವ ಮಹಿಳೆ ಅಪರಾಧ ಹಿನ್ನೆಲೆ ಹೊಂದಿದ್ದು, ಆಕೆಯ ವಿರುದ್ಧ ಎರಡು ಪೊಲೀಸ್ ಪ್ರಕರಣವಿದೆ” ಎಂದು ಅವರು ಹೇಳಿದರು.
ಮುಖ್ಯ ನ್ಯಾಯಾಧೀಶರ ಮೇಲಿನ ಆರೋಪ ‘‘ಬ್ಲಾಕ್ ಮೇಲ್ ತಂತ್ರ’’ವಾಗಿ ಕಾಣುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ಈ ಹಂತದಲ್ಲಿ ಯಾವುದೇ ನ್ಯಾಯಾಂಗ ತೀರ್ಪು ನೀಡಲು ಒಪ್ಪದ ಮುಖ್ಯ ನ್ಯಾಯಾಧೀಶ ಗೊಗೊಯ್, ಅರುಣ್ ಮಿಶ್ರಾ ಹಾಗೂ ಜಸ್ಟಿಸ್ ಸಂಜೀವ್ ಖನ್ನಾ ಅವರಿದ್ದ ಪೀಠ, ‘‘ಸ್ವಯಂ ನಿರ್ಬಂಧ, ಹೊಣೆಗಾರಿಕೆಯಿಂದ ವರ್ತಿಸುವುದು ಮಾಧ್ಯಮಗಳ ವಿವೇಚನೆಗೆ ಬಿಡುತ್ತೇವೆ’’ಎಂದಿದೆ.
‘‘ಇಂತಹ ನಿರ್ಲಜ್ಜ ಆರೋಪಗಳು ನ್ಯಾಯಾಂಗದ ಮೇಲೆ ಜನರ ನಂಬಿಕೆಯನ್ನು ಅಲುಗಾಡಿಸುತ್ತವೆ’’ ಎಂದು ಜಸ್ಟಿಸ್ ಮಿಶ್ರಾ ಇದೇ ಸಂದರ್ಭ ಹೇಳಿದರು.