ಉಡುಪಿ ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣ; ಮಳೆಯ ನಿರೀಕ್ಷೆಯಲ್ಲಿ ನಗರಸಭೆ
ಬಜೆ ಡ್ಯಾಂನಲ್ಲಿರುವ ನೀರಿನ ಸಂಗ್ರಹ 10 ದಿನಕ್ಕೆ ಮಾತ್ರ ಲಭ್ಯ

ಉಡುಪಿ, ಎ.20: ಉಡುಪಿ ನಗರಕ್ಕೆ ನೀರು ಪೂರೈಸುವ ಸ್ವರ್ಣ ನದಿಯ ಬಜೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ಕೇವಲ 10 ದಿನಕ್ಕೆ ಬೇಕಾದಷ್ಟು ಮಾತ್ರ ನೀರಿನ ಸಂಗ್ರಹವಿದೆ. ಹೀಗಾಗಿ ನಗರಸಭೆಯ ಅಧಿಕಾರಿಗು ಈಗ ಮಳೆಯ ನಿರೀಕ್ಷೆಯಲ್ಲಿದ್ದಾರೆ.
ಒಂದೆಡೆ ದಿನದಿಂದ ದಿನಕ್ಕೆ ಬಿಸಿಲ ತಾಪ ಏರಿಕೆಯಾಗುತ್ತಿದ್ದರೆ, ಇನ್ನೊಂದೆಡೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ನಗರಕ್ಕೆ ನೀರುಣಿಸುವ ಸ್ವರ್ಣಾ ನದಿಯ ಬಜೆ ಡ್ಯಾಂನಲ್ಲಿ ಇಂದು ಕೇವಲ 2.69 ಮೀಟರ್‌ನಷ್ಟು ಮಾತ್ರ ನೀರಿನ ಸಂಗ್ರಹವಿದ್ದು, ಇದನ್ನು ಸುಮಾರು 10 ದಿನಗಳ ಕಾಲ ನಗರಕ್ಕೆ ಪೂರೈಸಬಹುದು ಎಂಬುದು ಅಧಿಕಾರಿಗಳು ಅಭಿಪ್ರಾಯ.
ಸದ್ಯಕ್ಕೆ ನಗರಕ್ಕೆ ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಎತ್ತರ ಪ್ರದೇಶಗಳಲ್ಲಿ ನೀರಿನ ಒತ್ತಡದ ಕೊರತೆಯಿಂದ ಸಮಸ್ಯೆ ಉಲ್ಬಣ ಗೊಂಡಿದೆ. 10 ದಿನದ ನಂತರ ನಗರಕ್ಕೆ ಎಲ್ಲಿಂದ ನೀರು ಪೂರೈಕೆ ಮಾಡುವುದು ಎಂಬುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಈ ಬಗ್ಗೆ ಎ.22ರಂದು ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕರೆದ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಪ್ರತಿದಿನ ನಗರಕ್ಕೆ 24 ಎಂಎಲ್‌ಡಿ ನೀರಿನ ಅಗತ್ಯವಿದ್ದು, ನಗರದಲ್ಲಿ ಈಗ ಇರುವ ನೀರಿನ ಮೂಲಗಳಾದ ಬಾವಿ, ಕೊಳವೆ ಬಾವಿಯಿಂದ ಇಷ್ಟು ಪ್ರಮಾಣದ ನೀರು ಪೂರೈಕೆ ಅಸಾಧ್ಯವಾಗಿದೆ. ಆದುದರಿಂದ ಇದಕ್ಕೆಲ್ಲ ಮಳೆಯ ಆಗಮನ ಒಂದೇ ಪರಿಹಾರ. ಉಡುಪಿಗಿಂತ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯಾದರೆ ಮಾತ್ರ ಸ್ವರ್ಣ ನದಿುಲ್ಲಿ ನೀರಿನ ಸಂಗ್ರಹ ಹೆಚ್ಚುತ್ತದೆ.
ಒಂದು ವೇಳೆ ಮಳೆಯಾಗದಿದ್ದರೆ ಶಿರೂರು ಸೇತುವೆ ಬಳಿ ಡ್ರಜ್ಜಿಂಗ್ ನಡೆಸಿ ಅಲ್ಲಿ ಗುಂಡಿಗಳಲ್ಲಿರುವ ನೀರನ್ನು ಬಜೆ ಡ್ಯಾಂಗೆ ಪಂಪ್ ಮಾಡಿ ನಗರಕ್ಕೆ ನೀರು ಪೂರೈಸಬೇಕಾಗುತ್ತದೆ. ಇಲ್ಲವೇ ಟ್ಯಾಂಕರ್ ಮೂಲಕ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡುವುದು ಅನಿವಾರ್ಯ. ಇನ್ನು ಮಳೆಗಾಲ ಆರಂಭಕ್ಕೆ 40 ದಿನಗಳಿವೆ. ಸ್ವರ್ಣ ನದಿ ಬರಿದಾದರೆ ಸುಮಾರು 30 ದಿನಗಳ ಕಾಲ ನಗರಕ್ಕೆ ನೀರೇ ಇರುವುದಿಲ್ಲ ಎಂದು ನಗರಸಭೆ ಅಧಿಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ನಗರದ ಯಾವುದೇ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಂಟಾಗಿಲ್ಲ. ಮುಂದೆ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಎ.22ರಂದು ನಡೆಯುವ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳ ಲಾಗುವುದು. ನೀರಿನ ಸಮಸ್ಯೆ ಬಾರದಂತೆ ಕ್ರಮ ತೆಗೆದುಕೊಳ್ಳಲಾಗಿದ್ದು, ನಗರಸಭೆಯಿಂದ ಟ್ಯಾಂಕರ್ ಮೂಲಕ ನೀರು ಪೂೈಸುವ ಕಾರ್ಯ ಈವರೆಗೆ ಆರಂಭಿಸಿಲ್ಲ.
-ಆನಂದ ಕಲ್ಲೋಳಿಕರ್, ಪೌರಾಯುಕ್ತರು, ಉಡುಪಿ ನಗರಸಭೆ
ಬಜೆ ಡ್ಯಾಂನಲ್ಲಿ ನೀರಿನ ಮಟ್ಟ ಇಳಿಮುಖ ಆಗುತ್ತಿರುವ ಹಿನ್ನೆಲೆಯಲ್ಲಿ ವಾರಕ್ಕೆ ಮೂರು ದಿನಗಳ ಕಾಲ ಮಾತ್ರ ನೀರು ಪೂರೈಕೆ ಮಾಡಲು ಸೂಚಿಸಿದ್ದೆ. ಆದರೆ ಅದು ಶೇ.100ರಷ್ಟು ಕಾರ್ಯಗರ್ತ ಆಗಿಲ್ಲ. ಆದುದರಿಂದ ಈಗ ಸಮಸ್ಯೆ ಉದ್ಭವಿಸಿರಬಹುದು. ಈ ಬಗ್ಗೆ ನಗರಸಭೆಯಿಂದ ವರದಿ ತರಿಸಿ ಎ.22ರಂದು ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು. ಸದ್ಯ ಇರುವ ನೀರಿನ ಸಮಸ್ಯೆ ಹಾಗೂ ಮುಂದಿನ ಮಳೆಗಾಲಕ್ಕೆ ಯಾವ ರೀತಿ ಸಜ್ಜಾಗಬೇಕೆಂಬುದರ ಬಗ್ಗೆ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು.
-ಹೆಫ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿ, ಉಡುಪಿ







