ಅಮೇಠಿಯಲ್ಲಿ ರಾಹುಲ್ ಸ್ಪರ್ಧೆಗೆ ಹೊಸ ಸಂಕಷ್ಟ !
ಕಾಂಗ್ರೆಸ್ ಅಧ್ಯಕ್ಷರ ನಾಮಪತ್ರದಲ್ಲಿರುವ ಸಮಸ್ಯೆಯೇನು ?
ಅಮೇಠಿ, ಎ. 20: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಾಮಪತ್ರದ ಪರಿಶೀಲನೆಯನ್ನು ಎಪ್ರಿಲ್ 22ಕ್ಕೆ ಮುಂದೂಡುವಂತೆ ಅಮೇಠಿ ಚುನಾವಣಾ ಅಧಿಕಾರಿ ರಾಮ್ ಮನೋಹರ್ ಮಿಶ್ರಾ ಆದೇಶಿಸಿದ್ದಾರೆ.
ರಾಹುಲ್ ಗಾಂಧಿ ಅವರ ಅಭ್ಯರ್ಥಿತನದಲ್ಲಿ ಅಸಂಗತತೆ ಇರುವುದಾಗಿ ಆರೋಪಿಸಿ ಸ್ವತಂತ್ರ ಅಭ್ಯರ್ಥಿ ಧ್ರುವ ಲಾಲ್ ದೂರು ದಾಖಲಿಸಿದ ಬಳಿಕ ಮಿಶ್ರಾ ಈ ಆದೇಶ ನೀಡಿದ್ದಾರೆ. ದೂರಿನಲ್ಲಿ ಮೂರು ಪ್ರಮುಖ ವಿಷಯಗಳನ್ನು ಎತ್ತಲಾಗಿದೆ ಎಂದು ಧ್ರುವಲಾಲ್ ಅವರ ವಕೀಲ ರವಿ ಪ್ರಕಾಶ್ ಶನಿವಾರ ಹೇಳಿದ್ದಾರೆ.
ಇಂಗ್ಲೆಂಡ್‌ನ ಕಂಪೆನಿಗೆ ಸಂಬಂಧಿಸಿದ ದಾಖಲೆಗಳಲ್ಲಿ ರಾಹುಲ್ ಗಾಂಧಿ ಅವರ ಪೌರತ್ವವನ್ನು ಬ್ರಿಟಿಷ್ ಎಂದು ನಮೂದಿಸಲಾಗಿದೆ. ಈ ವಿಷಯದ ಬಗ್ಗೆ ಪ್ರಶ್ನಿಸಲಾಗಿದೆ ಎಂದು ಪ್ರಕಾಶ್ ಹೇಳಿದ್ದಾರೆ. ಜನ ಪ್ರತಿನಿಧಿತ್ವ ಕಾಯ್ದೆ ಅಡಿಯಲ್ಲಿ ಭಾರತೀಯರಲ್ಲದ ನಾಗರಿಕರು ದೇಶದ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.
ಅವರು ಯಾವ ಆಧಾರದಲ್ಲಿ ಬ್ರಿಟಿಶ್ ಪ್ರಜೆ? ಹಾಗೂ ಅವರು ಈಗ ಹೇಗೆ ಭಾರತದ ಪೌರತ್ವ ಪಡೆದರು ? ಈ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೆ, ರಾಹುಲ್ ಗಾಂಧಿ ಅವರ ನಾಮಪತ್ರವನ್ನು ಸ್ವೀಕರಿಸಿದಿರುವಂತೆ ಚುನಾವಣಾ ಅಧಿಕಾರಿಯವರಲ್ಲಿ ನಾವು ಮನವಿ ಮಾಡಿದ್ದೇವೆ ಎಂದು ಪ್ರಕಾಶ್ ಹೇಳಿದ್ದಾರೆ.
2000-2009ರ ಅವಧಿಯ ಇಂಗ್ಲೆಂಡ್‌ನಲ್ಲಿರುವ ಕಂಪೆನಿಯ ಸೊತ್ತುಗಳ ಬಗ್ಗೆ ರಾಹುಲ್ ಗಾಂಧಿ ತಮ್ಮ ಅಫಿಧಾವಿತ್‌ನಲ್ಲಿ ಯಾವುದೇ ವಿವರ ಸಲ್ಲಿಸಿಲ್ಲ ಎಂದು ಪ್ರಕಾಶ್ ಹೇಳಿದ್ದಾರೆ. ರಾಹುಲ್ ಗಾಂಧಿ ಅವರ ವಿದ್ಯಾರ್ಹತೆಯ ಬಗ್ಗೆ ಹಲವು ಪ್ರಶ್ನೆಗಳು ಇವೆ ಎಂದು ಹೇಳಿದ ಪ್ರಕಾಶ್, ಅವರ ವಿದ್ಯಾರ್ಹತೆ ದಾಖಲೆಗಳಿಗೆ ಹೋಲಿಕೆಯಾಗುವುದಿಲ್ಲ. ಕಾಲೇಜಿನಲ್ಲಿ ಅವರು ರಾಹುಲ್ ವಿನ್ಸಿ ಎಂದು ದಾಖಲಿಸಿದ್ದಾರೆ. ರಾಹುಲ್ ಗಾಂಧಿ ಎಂಬ ಹೆಸರಿನಲ್ಲಿ ಯಾವುದೇ ಪ್ರಮಾಣಪತ್ರ ಲಭ್ಯವಿಲ್ಲ ಎಂದಿದ್ದಾರೆ. ಆದುದರಿಂದ ರಾಹುಲ್ ಗಾಂಧಿ ಹಾಗೂ ರಾಹುಲ್ ವಿನ್ಸಿ ಒಬ್ಬನೇ ವ್ಯಕ್ತಿಯ ಹೆಸರೇ ? ಎಂದು ನಾವು ಕೇಳುತ್ತಿದ್ದೇವೆ. ಒಂದೇ ಅಲ್ಲದಿದ್ದರೆ, ಶೈಕ್ಷಣಿಕ ಪ್ರಮಾಣ ಪತ್ರಗಳ ಪರಿಶೀಲನೆಗೆ ನಾವು ಆಗ್ರಹಿಸುತ್ತಿದ್ದೇವೆ. ಆಗ ಮಾತ್ರ ಅದನ್ನು ಪರಿಶೀಲಿಸಲು ಸಾಧ್ಯ ಎಂದು ಅವರು ರವಿ ಪ್ರಕಾಶ್ ಹೇಳಿದ್ದಾರೆ.