ಶಸ್ತ್ರಾಸ್ತ್ರ ದಲ್ಲಾಳಿಯ ಜಾಮೀನು ಅರ್ಜಿ ವಜಾ ಮಾಡಿದ ನ್ಯಾಯಾಲಯ
ವಿವಿಐಪಿ ಕಾಪ್ಟರ್ ಪ್ರಕರಣ
ಹೊಸದಿಲ್ಲಿ,ಎ.20: ಆಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣ ಪ್ರಕರಣದಲ್ಲಿ ಬಂಧಿಸಲ್ಪಟಿರುವ ಶಸ್ತ್ರಾಸ್ತ್ರಗಳ ದಲ್ಲಾಳಿ ಸುಷೇನ್ ಮೋಹನ ಗುಪ್ತಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದಿಲ್ಲಿಯ ವಿಶೇಷ ನ್ಯಾಯಾಲಯವು ಶನಿವಾರ ವಜಾಗೊಳಿಸಿತು.
ಗುಪ್ತಾನ ನ್ಯಾಯಾಂಗ ಬಂಧನದ ಅವಧಿಯು ಶನಿವಾರ ಅಂತ್ಯಗೊಂಡಿತ್ತು. ಜಾಮೀನು ಅರ್ಜಿಯನ್ನು ವಜಾಗೊಳಿಸಿದ ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ ಅವರು ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ಆದೇಶಿಸಿದರು.
ಯುಎಇಯಿಂದ ಗಡಿಪಾರುಗೊಂಡು ಜಾರಿ ನಿರ್ದೇಶನಾಲಯ(ಈ.ಡಿ)ದಿಂದ ಬಂಧನಕ್ಕೊಳಗಾದ ಬಳಿಕ ಪ್ರಕರಣದಲ್ಲಿ ಮಾಫಿ ಸಾಕ್ಷಿದಾರನಾಗಿರುವ ರಾಜೀವ ಸಕ್ಸೇನಾ ಬಹಿರಂಗಗೊಳಿಸಿದ್ದ ಮಾಹಿತಿಗಳಿಂದಾಗಿ ಪ್ರಕರಣದಲ್ಲಿ ಗುಪ್ತಾನ ಪಾತ್ರವು ಬೆಳಕಿಗೆ ಬಂದ ಬಳಿಕ ಈ.ಡಿ. ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯಡಿ ಆತನನ್ನು ಬಂಧಿಸಿತ್ತು.
ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವ ವಿಜಯ ಮಲ್ಯ ಮತ್ತು ನೀರವ್ ಮೋದಿ ಅವರಂತಹ 36 ಉದ್ಯಮಿಗಳಂತೆ ಗುಪ್ತಾ ಕೂಡ ದೇಶದಿಂದ ಪರಾರಿಯಾಗುವ ಸಾಧ್ಯತೆಯಿದೆ ಎಂದು ವಾದಿಸಿದ್ದ ಈ.ಡಿ.ಆತನ ಜಾಮೀನು ಅರ್ಜಿಯನ್ನು ವಿರೋಧಿಸಿತ್ತು.