ಮೋದಿಗೆ ಚುನಾವಣೆಗಳಲ್ಲಿ ಸೋಲುವ ಭೀತಿ ಕಾಡುತ್ತಿದೆ: ಮಮತಾ ಬ್ಯಾನರ್ಜಿ
ಪನಿಘಟಾ(ಪ.ಬಂ),ಎ.20: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣೆಗಳಲ್ಲಿ ಸೋಲುವ ಭೀತಿ ಕಾಡುತ್ತಿದೆ ಮತ್ತು ಜನರನ್ನು ಕೋಮು ಆಧಾರದಲ್ಲಿ ವಿಭಜಿಸುವ ಮೂಲಕ ರಾಜ್ಯವನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಶನಿವಾರ ಇಲ್ಲಿ ಹೇಳಿದರು.
ತಾನು ಚುನಾವಣೆಗಳನ್ನು ಸೋಲುತ್ತೇನೆ ಎನ್ನುವುದು ಅವರಿಗೆ(ಮೋದಿ) ಗೊತ್ತಾಗಿದೆ ಮತ್ತು ಇದೇ ಕಾರಣದಿಂದ ಅವರ ಮುಖವು ನಿಸ್ತೇಜಗೊಂಡಿದೆ. ಅವರೀಗ ಸೋಲಿನ ಭೀತಿಯಿಂದ ನರಳುತ್ತಿದ್ದಾರೆ ಮತ್ತು ಉತ್ತರ ಪ್ರದೇಶ, ರಾಜಸ್ಥಾನ, ದಿಲ್ಲಿ, ಪಂಜಾಬ್, ಆಂಧ್ರಪ್ರದೇಶ, ಗುಜರಾತ್, ಒಡಿಶಾ ಮತ್ತು ಇತರೆಡೆಗಳಲ್ಲಿ ಸೋಲುವ ಬಗ್ಗೆ ಚಿಂತಿಸುತ್ತ ಪ್ರತಿದಿನ ಅರ್ಥವಿಲ್ಲದ ಮಾತುಗಳನ್ನಾಡುತ್ತಿದ್ದಾರೆ ಎಂದು ಇಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಬ್ಯಾನರ್ಜಿ ಹೇಳಿದರು.
ತ್ರಿಪುರಾದಲ್ಲಿ ಬಿಜೆಪಿ ಗೆದ್ದರೆ ಅದರ ಬಗ್ಗೆ ತಾನು ತಲೆ ಕೆಡಿಸಿಕೊಳ್ಳುವುದಿಲ್ಲ,ಆದರೆ ಅದು ಮೋದಿಗೆ 543 ಸ್ಥಾನಗಳನ್ನು ನೀಡುವುದಿಲ್ಲ. ಇದೇ ಕಾರಣದಿಂದ ಹಿಂದು-ಮುಸ್ಲಿಂ ಕೋಮು ಆಧಾರದಲ್ಲಿ ಜನರನ್ನು ಒಡೆಯುವ ಮೂಲಕ ಮತಗಳನ್ನು ಗಳಿಸುವ ಆಸೆಯೊಂದಿಗೆ ಪ.ಬಂಗಾಳವನ್ನು ಸುತ್ತುತ್ತಿದ್ದಾರೆ ಎಂದರು.
ಮುಖ್ಯಮಂತ್ರಿಯಾಗಿ ತಾನು ಪ.ಬಂಗಾಳಕ್ಕೆ ಏನನ್ನೂ ಮಾಡಿಲ್ಲ ಎಂಬ ಬಿಜೆಪಿಯ ಆರೋಪಗಳಿಗೆ ಪ್ರತಿಕ್ರಿಯಿಸಿದ ಬ್ಯಾನರ್ಜಿ,ಹಾಗಿದ್ದರೆ ಜನರು ತನ್ನಿಂದ ಉತ್ತರವನ್ನು ಕೋರುತ್ತಾರೆ ಎಂದರು.
ನೀವು ದೇಶವನ್ನು ಉಳಿಸಲು ಬಯಸುತ್ತೀರಾದರೆ ಬಿಜೆಪಿಗೆ ಮತಗಳನ್ನು ನೀಡಬೇಡಿ. ನೋಟು ನಿಷೇಧ,ಅದರಿಂದ ಅನುಭವಿಸಿದ ಬವಣೆಗಳನ್ನು ನೀವು ಮರೆತಿದ್ದೀರಾ? ಕೋಟ್ಯಂತರ ಜನರು ಸಂಕಷ್ಟ ಅನುಭವಿಸಿದ್ದಾರೆ. ಈಗ ಚುನಾವಣೆಗಳಲ್ಲಿ ಮೋದಿ ಅವರಿಗೆ ತಕ್ಕ ಉತ್ತರವನ್ನು ನೀಡಿ ಎಂದು ಬ್ಯಾನರ್ಜಿ ಮತದಾರರನ್ನು ಕೋರಿಕೊಂಡರು.