ಎಸ್ಪಿ ಅಭ್ಯರ್ಥಿಯನ್ನು ‘ಬಾಬರನ ಮಗು’ ಎಂದು ಕರೆದು ವಿವಾದ ಸೃಷ್ಟಿಸಿದ ಆದಿತ್ಯನಾಥ್
ಸಂಭಲ್, ಎ. 20: ಸಂಭಲ್‌ನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶಫೀಖುರ್ರಹ್ಮಾನ್ ಬರ್ಖ್ ಅವರನ್ನು ‘ಬಾಬರನ ಮಗು’ ಎಂದು ಕರೆಯುವ ಮೂಲಕ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಇನ್ನೊಂದು ವಿವಾದಕ್ಕೆ ಒಳಗಾಗಿದ್ದಾರೆ. ಕೋಮುವಾದಿ ಹಾಗೂ ಪ್ರಚೋದನಕಾರಿ ಭಾಷಣ ಮಾಡಿರುವುದಕ್ಕೆ ಚುನಾವಣಾ ಆಯೋಗ ವಿಧಿಸಿದ 72 ಗಂಟೆಗಳ ನಿಷೇಧದ ಬಳಿಕ ಚುನಾವಣಾ ಪ್ರಚಾರಕ್ಕೆ ಮರಳಿದ ದಿನವೇ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ.
ಸಂಭಲ್ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಆದಿತ್ಯನಾಥ್, ‘‘ಎಸ್ಪಿ ಬಗ್ಗೆ ಏನು ಹೇಳಲು ಸಾಧ್ಯ. ಬಾಬರನ ವಂಶಸ್ಥರು ಎಂದು ಪ್ರತಿಪಾದಿಸುತ್ತಿರುವ, ಬಾಬಾ ಸಾಹೇಬ್ ಪ್ರತಿಮೆಗೆ ಹೂಹಾರ ಹಾಕುವುದಕ್ಕೆ ಹಿಂಜರಿಯುವ, ವಂದೇ ಮಾತರಂ ಪಠಿಸಲು ನಿರಾಕರಿಸುವ ವ್ಯಕ್ತಿಯನ್ನು ಎಸ್ಪಿ ಸಂಭಲ್‌ನಲ್ಲಿ ಕಣಕ್ಕಿಳಿಸಿದೆ.’’ ಎಂದು ಹೇಳಿದ್ದಾರೆ. “ನಾನು ಹಿಂದೊಮ್ಮೆ ಸಂಸತ್‌ನಲ್ಲಿ ಸದಸ್ಯರಾಗಿದ್ದ ಶಫೀಖುರ್ರಹ್ಮಾನ್ ಬರ್ಖ್ ಅವರಲ್ಲಿ ನಿಮ್ಮ ಪೂರ್ವಜರು ಯಾರು ಎಂದು ಪ್ರಶ್ನಿಸಿದ್ದೆ. ಅದಕ್ಕೆ ಅವರು ನಾನು ಬಾಬರನ ವಂಶಸ್ಥ ಎಂದು ಹೇಳಿದ್ದರು. ಈಗ ಅವರು ಸಂಭಲ್‌ನಿಂದ ಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅಭಿವೃದ್ಧಿ ವಿರೋಧಿಗಳು, ಯುವ ವಿರೋಧಿಗಳು, ದ್ರೋಹಿಗಳು, ಭಯೋತ್ಪಾದಕರು ಹಾಗೂ ಹನುಮಾನ್ ಭಕ್ತರ ವಿರೋಧಿಸುವವರ ಕೈಗೆ ದೇಶ ನೀಡಲು ನೀವು ಬಯಸುತ್ತೀರಾ ?” ಎಂದು ಆದಿತ್ಯನಾಥ್ ಜನರಲ್ಲಿ ಪ್ರಶ್ನಿಸಿದ್ದಾರೆ.
ಒಂದೆಡೆಯಲ್ಲಿ ದೇಶಕ್ಕೆ ಗೌರವ ತಂದ ಮೋದಿಜಿ ಇದ್ದಾರೆ. ದ್ರೋಹಿಗಳು ಅಥವಾ ಭಯೋತ್ಪಾದಕರು ಅಥವಾ ಬಾಬರ ಉತ್ತರಾಧಿಕಾರಿಗಳೆಂದು ಕರೆದುಕೊಳ್ಳುವ ಹಾಗೂ ಬಜರಂಗ ಬಲಿಯನ್ನು ವಿರೋಧಿಸುವವರ ಕೈಗೆ ದೇಶದ ಅಧಿಕಾರ ನೀಡಲು ನೀವು ಬಯಸುತ್ತಿರಾ ಎಂದು ಆದಿತ್ಯನಾಥ್ ಪ್ರಶ್ನಿಸಿದ್ದರು.