ಯುವ ಪೀಳಿಗೆ ಹಾಸ್ಯ ಪ್ರಜ್ಞೆಯಿಂದ ದೂರವಾಗುತ್ತಿದೆ: ರಂಗಕರ್ಮಿ ಆರ್.ನರೇಂದ್ರಬಾಬು
ಬೆಂಗಳೂರು, ಎ.21: ಸಮಾಜದಲ್ಲಿ ಹಾಸ್ಯ ಪ್ರಜ್ಞೆ ಮರೆಯಾಗುತ್ತಿದ್ದು, ಇಂದಿನ ಯುವ ಪೀಳಿಗೆ ಹಾಸ್ಯ ಪ್ರಜ್ಞೆಯಿಂದ ದೂರಾಗುತ್ತಿರುವುದು ಅತ್ಯಂತ ಆತಂಕದ ಸಂಗತಿ ಎಂದು ರಂಗಕರ್ಮಿ ಆರ್.ನರೇಂದ್ರಬಾಬು ಅಭಿಪ್ರಾಯಪಟ್ಟರು.
ರವಿವಾರ ಚಾಮರಾಜಪೇಟೆಯ ಕಸಾಪದಲ್ಲಿ ಹಾಸ್ಯ ತರಂಗ ಕಲಾ ಸಂಸ್ಥೆ ಹಾಗೂ ಪದ್ಮಾಲಯ ಪ್ರಕಾಶನ ಆಯೋಜಿಸಿದ್ದ, ಬೀಚಿ ಸ್ಮರಣೆ, ಹಾಸ್ಯ ದರ್ಶನ ವಿಶೇಷ ಸಂಚಿಕೆ ಹಾಗೂ ಶ್ರೀಧರರಾಯಸಂರ ‘ಬಾಳಬೆಳಕು ಕಥಾಸಂಕಲನ’ ಮತ್ತು ‘ಕರ್ನಾಟಕ ಮಹಾನುಭಾವ’, ಕೋ.ಲ.ರಂಗನಾಥರಾವ್‌ರ ಸಂಪಾದಕತ್ವದಲ್ಲಿ ‘ಹೆಣ್ಣು ಮತ್ತು ನಗು’, ‘ಆನಂದ’, ‘ಹೆಣ್ಣು ಮತ್ತು ಕವಿ’ ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಇತ್ತೀಚೆಗೆ ಹಾಸ್ಯ ಕಾರ್ಯಕ್ರಮಗಳಲ್ಲಿ ಜನ ಸೇರುವುದೇ ಕಮ್ಮಿ. ಅದು ಬೆರಳೆಣಿಕೆಯಷ್ಟೂ ಜನ ಕಾರ್ಯಕ್ರಮಕ್ಕೆ ಸೇರುತ್ತಾರೆ. ಸಾಮಾಜಿಕ ತಾಣಗಳಾದ ವಾಟ್ಸ್ ಆ್ಯಪ್, ಫೇಸ್ ಬುಕ್‌ನಲ್ಲೇ ಇಂದಿನ ಯುವಕ- ಯುವತಿಯರು ಹೆಚ್ಚು ಕಾಲಹರಣ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಯುವ ಪೀಳಿಗೆ ಹಾಸ್ಯ ಪ್ರವೃತ್ತಿ ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಾಸ್ಯಕೊಬ್ಬನೆ ಬೀಚಿ, ಕನ್ನಡಕೊಬ್ಬನೆ ಕೈಲಾಶಂ. ಹಾಸ್ಯಕೊಬ್ಬನೆ ಬೀಚಿ ಎಂದು ಏಕೆ ಹೇಳುತ್ತೇವೆ ಅಂದರೆ ಇತ್ತೀಚಿನ ದಿನಗಳಲ್ಲಿ ಹಾಸ್ಯ ಮನುಷ್ಯನ ಜೀವನದಲ್ಲಿ ಬಹಳ ದುಬಾರಿಯಾಗಿದೆ. ಈ ಜಡತ್ವದ ಬದುಕಿನಲ್ಲಿ ನಗು ಕಣ್ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹಾಸ್ಯಮಯ ಜೀವನಕ್ಕೆ ಎಲ್ಲರನ್ನೂ ಕೊಂಡೊಯ್ಯಲು ಬೀಚಿ ಸಂಚಿಕೆಯನ್ನು ಹೊರ ತರಲಾಗಿದೆ ಎಂದು ಹೇಳಿದರು.
ಬೀಚಿ ಅನಕೃರವರ ಸಂಧ್ಯಾ ರಾಗ ಕಾದಂಬರಿಯಿಂದ ಪ್ರೇರಣೆಗೊಂಡಿದ್ದರು. ಕನ್ನಡದ ಹಾಸ್ಯ ಪ್ರಪಂಚದಲ್ಲಿ ತಿಮ್ಮನನ್ನು ಸೃಷ್ಠಿಸುವ ಮೂಲಕ ಹಾಸ್ಯ ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರು. ವಿಡಂಬನಾತ್ಮಕ ಹಾಸ್ಯದ ಕುರಿತಂತೆ ಬೀಚಿ ಹೀಗೆ ಹೇಳಿದ್ದರು. ಮನುಷ್ಯ ನಗಬೇಕು. ಆ ನಗುವಿನ ಹಿಂದೆ ನೋವಿರಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ಅಲ್ಲದೆ, ಹಾಸ್ಯದ ಮೂಲಕವೆ ಸಮಾಜದ ಅಂಕು- ಡೊಂಕುಗಳನ್ನು ತಿದ್ದುವ ಕೆಲಸವಾಗಬೇಕು ಎಂಬುದನ್ನು ಪ್ರತಿಪಾದಿಸಿದ್ದರು ಎಂದು ನೆನೆದರು.
ನಗು ಮನುಷ್ಯನ ದುಖಃ ದುಗುಡಗಳನ್ನು ನಿವಾರಿಸುತ್ತದೆ. ನಾವು ನಗು ಎಂದು ಸೂಚಿಸಿ ನಗಿಸಬೇಕಾಗಿಲ್ಲ. ನಗುವುದಕ್ಕೆ ತರಬೇತಿ ಕೊಡಿಸುವ ಅಗತ್ಯವಿಲ್ಲ. ನಗು ಮಾನವ ಸಹಜವಾದ ಪ್ರಕ್ರಿಯೆಯಾಗಿದ್ದು, ಭೂಮಿ ಮೇಲೆ ಅನೇಕ ಪ್ರಾಣಿಗಳಿವೆ. ನಗುವ ಗುಣ ಆತನಲ್ಲಿರುವುದರಿಂದ ಇವೆಲ್ಲ ಪ್ರಾಣಿಗಳಲ್ಲೂ ಮನುಷ್ಯ ಸುಂದರವಾದ ಪ್ರಾಣಿಯಾಗಿದ್ದಾನೆ ಎಂದು ತಿಳಿಸಿದರು.
ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದತಿಶಯದ ಧರ್ಮ, ನಗುವ ನಗಿಸುವ ನಗಿಸಿ ನಗುತ ಬಾಳುವ ವರವಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ ಎಂದು ಡಿವಿಜಿಯವರು ವಿವರಿಸಿದ್ದರು ಎಂದು ಸ್ಮರಿಸಿಕೊಂಡರು.
ಇಂದಿನ ಪೀಳಿಗೆ ಯಾಂತ್ರಿಕೃತ ಜಗತ್ತಿಗೆ ಅಂಟಿಕೊಂಡಿದ್ದು, ದಿನದ 24 ಗಂಟೆಯೂ ವೃತ್ತಿಯಲ್ಲೇ ಮುಳುಗುತ್ತಾರೆ. ಈ ನಿಟ್ಟಿನಲ್ಲಿ ಯಾಂತ್ರಿಕ ಬದುಕಿನಲ್ಲಿ ನಗುವಿನ ಸ್ಥಾನ ಕಳೆದು ಹೋಗುತ್ತಿದೆ.
- ಆರ್.ನರೇಂದ್ರಬಾಬು, ರಂಗಕರ್ಮಿ







