ನಿಖಿಲ್ ಗೆಲ್ಲದಿದ್ದರೆ ರಾಜಕೀಯ ನಿವೃತ್ತಿ: ಸಚಿವ ಸಿ.ಎಸ್.ಪುಟ್ಟರಾಜು

ಶಿವಮೊಗ್ಗ, ಎ. 21:ನಿಖಿಲ್ ಕನಿಷ್ಠ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ. ಒಂದು ವೇಳೆ ಗೆಲ್ಲದಿದ್ದರೆ ನಾನು ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ. ಆದರೆ ಸುಮಲತಾ ಸೋತರೆ ಯಡಿಯೂರಪ್ಪ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಾರೆಯೇ? ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಪ್ರಶ್ನಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮಂಡ್ಯದಲ್ಲಿ ಸುಮಲತಾ ಯಾವತ್ತೂ ಬಿಜೆಪಿಗೆ ಸೇರಲ್ಲವೆಂದಿದ್ದರು. ಕಳ್ಳರು ಕಳ್ಳತನಕ್ಕೆ ಸಹಾಯವಾಗಲು ಬ್ಯಾಟರಿ ಹಿಡಿದ ಹಾಗೆ, ಬಿಜೆಪಿಯ ಬಿಎಸ್‌ವೈ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವತಂತ್ರ್ಯ ಅಭ್ಯರ್ಥಿಗೆ ಅನುಕೂಲವಾಗುವಂತೆ ಪ್ರಚಾರ ಮಾಡಿದರು. ಮೋದಿಯವರು ಮೈಸೂರಿನಲ್ಲಿ ಸುಮಲತಾ ಪರ ಪ್ರಚಾರ ಮಾಡಿದರು. ಆದರೆ ಸುಮಲತಾ ಪರ ಈ ಮುಖಂಡರು ಯಾರು ಮಂಡ್ಯ ಕ್ಷೇತ್ರಕ್ಕೆ ಬರಲಿಲ್ಲವೆಂದು ಟೀಕಿಸಿದರು.
ಜೆಡಿಎಸ್ ನಾಯಕರು ಚುನಾವಣೆ ಮುಗಿದ ಮೇಲೂ ಕಿರುಕುಳ ಕೊಡುತ್ತಿದ್ದಾರೆ ಎಂಬ ಸುಮಲತಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಯಾವುದೇ ಹುರುಳಿಲ್ಲ. ಮಂಡ್ಯದಲ್ಲಿ ಯಾವುದೇ ದ್ವೇಷದ ರಾಜಕಾರಣ ನಡೆಯುತ್ತಿಲ್ಲ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರ ಹಕ್ಕನ್ನು ಮೊಟಕು ಮಾಡಲು ಸಾಧ್ಯವಿಲ್ಲ. ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಎಂಬ ಹೆಸರಿಟ್ಟುಕೊಂಡ ಐವರು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಇದರಲ್ಲಿ ಜೆಡಿಎಸ್ ಪಾತ್ರವಿಲ್ಲ ಎಂದರು.





