ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಸಿದ್ಧವಾಗಿದ್ದಾರೆ: ದಿನೇಶ್ ಗುಂಡೂರಾವ್

ಬೆಂಗಳೂರು, ಎ.23: ಲೋಕಸಭಾ ಚುನಾವಣೆಯ ಬಳಿಕ ಕೇಂದ್ರದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬರಲಿದೆ. ಆಗ ಬಿಜೆಪಿಯವರ ಆಪರೇಷನ್ ಕಮಲವೂ ಬಿದ್ದು ಹೋಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇವರು ಮಾಡುತ್ತಿರುವ ರಾಜಕಾರಣವನ್ನು ನೋಡಿ ಬೇಸತ್ತು ಹಲವಾರು ಬಿಜೆಪಿ ಶಾಸಕರು ನಮ್ಮ ಪಕ್ಷ ಸೇರಲು ಸಿದ್ಧವಾಗಿದ್ದಾರೆ ಎಂದರು.
ಹೊಸ ಸರಕಾರ ಬರುತ್ತಿದ್ದಂತೆ ಬಿಜೆಪಿಯವರ ಪಾಲಿಗೆ ಐಟಿ, ಸಿಬಿಐ, ಇಡಿ ಮೂಲಕ ಬ್ಲಾಕ್ಮೇಲ್ ಮಾಡುವುದು ಎಲ್ಲವೂ ಮುಗಿದ ಅಧ್ಯಾಯವಾಗಲಿದೆ. ನಮ್ಮ ಮೈತ್ರಿ ಸರಕಾರಕ್ಕೆ ಏನು ಆಗುವುದಿಲ್ಲ. ಬಿಜೆಪಿಯವರಿಗೆ ಮತ್ತೊಮ್ಮೆ ಭ್ರಮನಿರಸನವಾಗಲಿದೆ. ಆಪರೇಷನ್ ಕಮಲ ಅವರಿಗೆ ತಿರುಗುಬಾಣವಾಗುತ್ತದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ದಿನೇಶ್ಗುಂಡೂರಾವ್, ಅವರು ಯಾವ ನಿರ್ಧಾರ ಬೇಕಾದರೂ ತೆಗೆದುಕೊಳ್ಳಬಹುದು. ಈಗಾಗಲೇ ಅವರನ್ನು ಹಲವು ಬಾರಿ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ ಎಂದರು.
ಒಂದೊಂದು ದಿನ, ಒಂದೊಂದು ಹೇಳಿಕೆಗಳನ್ನು ಅವರು ನೀಡುತ್ತಾರೆ. ಅಂತಿಮವಾಗಿ ಯಾವುದಾದರೂ ಒಂದು ತೀರ್ಮಾನವನ್ನು ಅವರು ತೆಗೆದುಕೊಳ್ಳಲಿ. ಲೋಕಸಭೆಯ ಚುನಾವಣಾ ಫಲಿತಾಂಶ ಬರಲಿ, ಮುಂದೆ ಏನಾಗುತ್ತದೆ ಎಂಬುದನ್ನು ನೋಡೋಣ ಎಂದು ಅವರು ಹೇಳಿದರು.