ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟ ಕುಸಿದರೆ ಏನಾಗುತ್ತದೆ?: ಇಲ್ಲಿದೆ ಮಾಹಿತಿ
ನಿಮ್ಮ ರಕ್ತದಲ್ಲಿಯ ಸಕ್ಕರೆ(ಗ್ಲುಕೋಸ್) ಮಟ್ಟವು ಸಾಮಾನ್ಯಕ್ಕಿಂತ ಕೆಳಕ್ಕಿಳಿದರೆ ಅಥವಾ ಇನ್ಸುಲಿನ್ ಆಘಾತ (ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಅತಿಯಾಗಿ ಅತ್ಯಂತ ಕಡಿಮೆ ಗ್ಲುಕೋಸ್ ಉಳಿದಿರುವ ಸ್ಥಿತಿ)ವುಂಟಾದರೆ ಅದನ್ನು ಹೈಪೊಗ್ಲೈಸಿಮಿಯಾ ಎಂದು ಕರೆಯಲಾಗುತ್ತದೆ. ನೀವು ಊಟವನ್ನು ತಪ್ಪಿಸಿದಾಗ ರಕ್ತದಲ್ಲಿ ಸಕ್ಕರೆ ಮಟ್ಟವು ಇಳಿಯುತ್ತದೆ ಅಥವಾ ನಿಮ್ಮ ಮೇದೋಜ್ಜೀರಕ ಗ್ರಂಥಿಯು ಅಗತ್ಯಕ್ಕಿಂತ ಹೆಚ್ಚಿನ ಇನ್ಸುಲಿನ್ ಅನ್ನು ಬಿಡುಡೆಗೊಳಿಸಿದಾಗಲೂ ಈ ಸ್ಥಿತಿಯುಂಟಾಗುತ್ತದೆ.
ಮಧುಮೇಹದಿಂದಾಗಿಯೂ ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾಗುತ್ತದೆ ಮತ್ತು ಟೈಪ್-1 ಮಧುಮೇಹಿಗಳಲ್ಲಿ ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದನೆಯನ್ನು ನಿಲ್ಲಿಸಿದರೆ,ಟೈಪ್-2 ಮಧುಮೇಹಿಗಳಲ್ಲಿ ಇನ್ಸುಲಿನ್ ಅನ್ನು ಸೂಕ್ತವಾಗಿ ಬಳಸಿಕೊಳ್ಳಲು ಶರೀರಕ್ಕೆ ಸಾಧ್ಯವಾಗುವುದಿಲ್ಲ. ರಕ್ತದಲ್ಲಿ ಸಕ್ಕರೆ ಮಟ್ಟ ಅತಿಯಾಗಿ ಹೆಚ್ಚುವುದನ್ನು ತಡೆಯಲು ಸೂಕ್ತ ಪ್ರಮಾಣದಲ್ಲಿ ಇನ್ಸುಲಿನ್ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಇನ್ಸುಲಿನ್ ಅತಿಯಾದ ಪ್ರಮಾಣದಲ್ಲಿದ್ದರೆ ಸಕ್ಕರೆ ಮಟ್ಟವು ತೀರ ಕಡಿಮೆಯಾಗುತ್ತದೆ.
ಅತಿಯಾದ ಮದ್ಯಪಾನ,ವಿಶೇಷವಾಗಿ ಖಾಲಿಹೊಟ್ಟೆಯಲ್ಲಿ ಮದ್ಯಸೇವನೆಯು ರಕ್ತದಲ್ಲಿ ಸಕ್ಕರೆ ಮಟ್ಟ ಕುಸಿಯಲು ಇನ್ನೊಂದು ಸಂಭಾವ್ಯ ಕಾರಣವಾಗಿದೆ. ಅತಿಯಾದ ಮದ್ಯಪಾನವು ಯಕೃತ್ತು ತಾನು ಶೇಖರಿಸಿಟ್ಟುಕೊಂಡಿರುವ ಗ್ಲುಕೋಸ್‌ನ್ನು ರಕ್ತದಲ್ಲಿ ಬಿಡುಗಡೆ ಮಾಡುವ ಅದರ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಮೂತ್ರಪಿಂಡ ರೋಗಗಳು,ಹಸಿವಿಲ್ಲದಿರುವಿಕೆ,ಮೇದೋಜ್ಜೀರಕ ಗ್ರಂಥಿಯ ಟ್ಯೂಮರ್ ಮತ್ತು ಅಡ್ರೆನಲ್ ಗ್ರಂಥಿ ರೋಗಗಳು ಇವೂ ರಕ್ತದಲ್ಲಿ ಸಕ್ಕರೆಯ ಮಟ್ಟ ಕುಸಿಯುವಂತೆ ಮಾಡುತ್ತವೆ.
ಹಲವಾರು ಲಕ್ಷಣಗಳು ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾಗಿರುವುದನ್ನು ಸೂಚಿಸುತ್ತವೆ. ಆದರೆ ರಕ್ತಪರೀಕ್ಷೆ ಮಾತ್ರ ಅದನ್ನು ಖಚಿತವಾಗಿ ತಿಳಿದುಕೊಳ್ಳಲು ಇರುವ ಏಕಮೇವ ಮಾರ್ಗವಾಗಿದೆ.
ನೀವು ಊಟ ಸೇವಿಸಿದ ಬಳಿಕ ಜೀರ್ಣಾಂಗವು ಕಾರ್ಬೊಹೈಡ್ರೇಟ್‌ಗಳನ್ನು ವಿಭಜಿಸುತ್ತದೆ ಮತ್ತು ನಿಮ್ಮ ಶರೀರಕ್ಕೆ ಇಂಧನವನ್ನೊದಗಿಸಲು ಅದನ್ನು ಗ್ಲುಕೋಸ್‌ನ್ನಾಗಿ ಪರಿವರ್ತಿಸುತ್ತದೆ. ಈ ಪ್ರಕ್ರಿಯೆಯು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಹಾರ್ಮೋನ್‌ನ್ನು ಬಿಡುಗಡೆಗೊಳಿಸುತ್ತದೆ.
ನೀವು ಕೆಲಗಂಟೆಗಳ ಕಾಲ ಆಹಾರವನ್ನು ಸೇವಿಸದಿದ್ದರೆ ರಕ್ತದಲ್ಲಿಯ ಸಕ್ಕರೆಯ ಮಟ್ಟವು ಕಡಿಮೆಯಾಗುತ್ತದೆ ಮತ್ತು ನಿಮ್ಮ ಮೇದೋಜ್ಜೀರಕ ಗ್ರಂಥಿಯು ಆರೋಗ್ಯಯುತವಾಗಿದ್ದರೆ ಅದು ಗ್ಲುಕಾಗನ್ ಎಂಬ ಹಾರ್ಮೋನ್‌ನ್ನು ಬಿಡುಗಡೆಗೊಳಿಸುತ್ತದೆ. ಗ್ಲುಕಾಗನ್ ಶೇಖರಗೊಂಡಿರುವ ಸಕ್ಕರೆಯನ್ನು ಸಂಸ್ಕರಿಸುವಂತೆ ಮತ್ತು ಅದನ್ನು ರಕ್ತದಲ್ಲಿ ಬಿಡುಗಡೆಗೊಳಿಸುವಂತೆ ಯಕೃತ್ತಿಗೆ ಸೂಚಿಸುತ್ತದೆ. ಎಲ್ಲವೂ ನಿಗದಿಯಂತೆ ನಡೆದರೆ ನೀವು ನಿಮ್ಮ ಮುಂದಿನ ಊಟವನ್ನು ಸೇವಿಸುವವರೆಗೆ ನಿಮ್ಮ ಸಕ್ಕರೆಯ ಮಟ್ಟವು ಸಹಜವಾಗಿರುತ್ತದೆ.
ರಕ್ತದಲ್ಲಿ ಸಕ್ಕರೆ ಮಟ್ಟ ಕುಸಿತವು ಹಸಿವು ಮತ್ತು ನಡುಕದಂತಹ ಆರಂಭದ ಲಕ್ಷಣಗಳನ್ನು ತೋರಿಸುವ ಎಪಿನೆಫ್ರೈನ್‌ನಂತಹ ಒತ್ತಡದ ಹಾರ್ಮೋನ್‌ಗಳನ್ನು ಶರೀರವು ಬಿಡುಗಡೆಗೊಳಿಸಲು ಕಾರಣವಾಗುತ್ತದೆ.
ಆಗಾಗ್ಗೆ ರಕ್ತದಲ್ಲಿ ಸಕ್ಕರೆ ಮಟ್ಟ ಕುಸಿಯುತ್ತಿದ್ದರೆ ನಿಮ್ಮ ಶರೀರವು ಒತ್ತಡ ಹಾರ್ಮೋನ್‌ಗಳ ಬಿಡುಗಡೆಯನ್ನು ನಿಲ್ಲಿಸಬಹುದು. ಇದೇ ಕಾರಣದಿಂದ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಆಗಾಗ್ಗೆ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯವಾಗಿದೆ.
ಸಕ್ಕರೆಯು ಶರೀರಕ್ಕೆ ಶಕ್ತಿಯ ಪ್ರಮುಖ ಮೂಲವಾಗಿದೆ ಮತ್ತು ಶರೀರದಲ್ಲಿ ಎಲ್ಲ ಜೀವಕೋಶಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಕ್ಕರೆಯು ಅಗತ್ಯವಾಗಿದೆ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟವು ಕಡಿಮೆಯಾದರೆ ಅದು ನಿಮ್ಮ ಕೇಂದ್ರ ನರಮಂಡಳದಲ್ಲಿ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿಶ್ಶಕ್ತಿ,ತಲೆ ಹಗುರವಾದಂತೆನಿಸುವುದು, ತಲೆ ಸುತ್ತುವಿಕೆ,ಆತಂಕ,ಉದ್ವೇಗ ಮತ್ತು ತೀವ್ರ ಹಸಿವು ಇವು ಕೆಲವು ಆರಂಭಿಕ ಲಕ್ಷಣಗಳಾಗಿವೆ. ಬಾಯಿಯಲ್ಲಿ ಜುಮುಗುಡುವಿಕೆ ಅಥವಾ ಮರಗಟ್ಟುವಿಕೆ ಇವೂ ರಕ್ತದಲ್ಲಿ ಸಕ್ಕರೆ ಕಡಿಮೆಯಾಗಿರುವುದನ್ನು ಸೂಚಿಸಬಹುದು.
ಮಸುಕಾದ ದೃಷ್ಟಿ,ತಲೆನೋವು,ಗೊಂದಲ,ಸರಳ ಕೆಲಸಗಳನ್ನೂ ಮಾಡಲು ಕಷ್ಟ ಇವು ಸಕ್ಕರೆ ಮಟ್ಟ ಕುಸಿತವನ್ನು ಸೂಚಿಸುವ ಇತರ ಲಕ್ಷಣಗಳಲ್ಲಿ ಸೇರಿವೆ. ರಾತ್ರಿಗಳಲ್ಲಿ ರಕ್ತದಲ್ಲಿ ಸಕ್ಕರೆಯ ಮಟ್ಟ ಕುಸಿದರೆ ದುಃಸ್ವಪ್ನಗಳು,ನಿದ್ರೆಯಲ್ಲಿ ಕೂಗಾಟ ಮತ್ತು ಇಂತಹ ಇತರ ವರ್ತನೆಗಳು ಕಾಣಿಸಿಕೊಳ್ಳುತ್ತವೆ. ರಕ್ತದಲ್ಲಿ ಸಕ್ಕರೆ ಮಟ್ಟ ಕುಸಿದಿರುವ ಸ್ಥಿತಿ ಅಥವಾ ಇನ್ಸುಲಿನ್ ಆಘಾತಕ್ಕೆ ಚಿಕಿತ್ಸೆ ಪಡೆಯದಿದ್ದರೆ ಅದು ಅತ್ಯಂತ ಅಪಾಯಕಾರಿಯಾಗಬಹುದು. ಸೆಳೆತಗಳು,ಪ್ರಜ್ಞಾಹೀನತೆ ಅಥವಾ ಸಾವಿಗೂ ಕಾರಣವಾಗಬಹುದು.