ಕೊಡಗಿನ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ: ತಕ್ಷಣ ಸ್ಪಂದಿಸಲು ಎಡಿಸಿ ಪಿ.ಶಿವರಾಜು ನಿರ್ದೇಶನ
ಕುಡಿಯುವ ನೀರು-ಬರ ನಿರ್ವಹಣೆ ಕುರಿತು ಸಭೆ

ಮಡಿಕೇರಿ,ಎ.25: ಜಿಲ್ಲೆಯ ನಾನಾ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಇಂತಹ ಕಡೆಗಳಲ್ಲಿ ತ್ವರಿತವಾಗಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕುಡಿಯುವ ನೀರು ಹಾಗೂ ಬರ ನಿರ್ವಹಣೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಡಿಯುವ ನೀರು ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಸಂಬಂಧ ಸಮಸ್ಯೆಗಳು ಕೇಳಿ ಬಂದಲ್ಲಿ ತಕ್ಷಣವೇ ತಹಶೀಲ್ದಾರ್, ಸಂಬಂಧಪಟ್ಟ ಎಂಜಿನಿಯರ್ ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಅವರು ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆ ಇದೆ ಎಂಬ ದೂರುಗಳು ಕೇಳಿ ಬರದಂತೆ ನೋಡಿಕೊಳ್ಳುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸುವಂತೆ ಪಿ.ಶಿವರಾಜು ಅವರು ನಿರ್ದೇಶನ ನೀಡಿದರು. ಜಾನುವಾರುಗಳಿಗೆ ಮೇವು, ಗೋಶಾಲೆ ತೆರೆಯುವುದು, ಮೇವು ಬ್ಯಾಂಕ್ ನಿರ್ಮಾಣ ಮತ್ತಿತರ ಬಗ್ಗೆ ಗಮನಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಯಾವುದೇ ಕಾರಣಕ್ಕೂ ಕುಡಿಯುವ ನೀರು ಸಮಸ್ಯೆ ಉಂಟಾಗಬಾರದು. ಜಿಲ್ಲಾ ವ್ಯಾಪ್ತಿಯಲ್ಲಿನ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಪಟ್ಟಿ ಮಾಡಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮುಂದಿನ ಮಳೆಗಾಲಕ್ಕೆ ಈಗಿನಿಂದಲೇ ಅಗತ್ಯ ತಯಾರಿ ಮಾಡಿಕೊಳ್ಳಬೇಕಿದೆ. ಮಳೆಯಿಂದ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಈಗಾಗಲೇ ಪ್ರಕೃತಿ ವಿಕೋಪ ಸಂಭವಿಸಿದ ಗ್ರಾಮಗಳಿಗೆ ಭೇಟಿ ನೀಡುವ ಮೂಲಕ ಸದ್ಯದ ಸ್ಥಿತಿಗತಿಯ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು. ಪ್ರಕೃತಿ ವಿಕೋಪದಡಿ ನಿರ್ಮಾಣವಾಗುತ್ತಿರುವ ಮನೆಗಳ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಎಂಜಿನಿಯರ್ ಗಳಿಗೆ ನಿರ್ದೇಶನ ನೀಡಿದರು.
ಜಿ.ಪಂ.ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್ ರೇವಣ್ಣವರ್ ಅವರು ಕುಡಿಯುವ ನೀರು ಸಂಬಂಧಿಸಿದಂತೆ ಜಿಲ್ಲೆಯ ಮೂರು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆಯಾಗಿದ್ದು, ಕುಡಿಯುವ ನೀರು ಸಂಬಂಧ ಹೆಚ್ಚಿನ ಗಮನಹರಿಸಲಾಗಿದೆ ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ ಕಳೆದ ವರ್ಷ ಟಾಸ್ಕ್ ಪೋರ್ಸ್‍ನಡಿ ಜಿಲ್ಲೆಯ ಮೂರು ತಾಲೂಕಿಗೆ ತಲಾ 75 ಲಕ್ಷದಂತೆ ಒಟ್ಟು 225 ಲಕ್ಷ ರೂ.ನಲ್ಲಿ 149 ಲಕ್ಷ ರೂ. ಬಿಡುಗಡೆಯಾಗಿದ್ದು, 107 ಕಾಮಗಾರಿ ತೆಗೆದುಕೊಳ್ಳಲಾಗಿದೆ. ಇದರಲ್ಲಿ 68 ಕಾಮಗಾರಿಗಳು ಪೂರ್ಣಗೊಂಡಿವೆ. 15 ಕಾಮಗಾರಿಗಳು ಪ್ರಗತಿಯಲ್ಲಿದೆ. 24 ಕಾಮಗಾರಿಗಳನ್ನು ಪ್ರಾರಂಭಿಸಬೇಕಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಿದೆ. ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಗ್ರಾ.ಪಂ.ಮೂಲಕ ನೀರಿನ ತೊಟ್ಟಿ ಅಳವಡಿಸಲು ಕ್ರಮವಹಿಸಲಾಗುತ್ತಿದೆ ಎಂದು ಪಶುಪಾಲನ ಇಲಾಖೆಯ ಉಪ ನಿರ್ದೇಶಕರಾದ ತಮ್ಮಯ್ಯ ಅವರು ಹೇಳಿದರು.
ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು, ಪ್ರಥಮ ಹಂತದಲ್ಲಿ 417 ಕುಟುಂಬಗಳನ್ನು ಆಯ್ಕೆ ಮಾಡಲಾಗಿದೆ. ಎರಡನೇ ಹಂತದಲ್ಲಿ 411 ಮನೆಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಒಟ್ಟು 829 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಬಾಕಿ ಇರುವುದನ್ನು ಪಟ್ಟಿ ಮಾಡಿ ಮನೆ ನಿರ್ಮಿಸಲಾಗುವುದು ಎಂದು ಹೇಳಿದರು. ಈ ಬಗ್ಗೆ ಮಾಹಿತಿ ನೀಡಿದ ಹೆಬಿಟೇಟ್ ಸಂಸ್ಥೆಯ ಎಂಜಿನಿಯರ್ ಅವರು ಈಗಾಗಲೇ ಕರ್ಣಂಗೇರಿಯಲ್ಲಿ 35, ಮದೆನಾಡು ಗ್ರಾಮದಲ್ಲಿ 53 ಮನೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಮೇ ಅಂತ್ಯದೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ಡಿಎಚ್‍ಒ ಡಾ.ಕೆ.ಮೋಹನ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಗೋಪಾಲಕೃಷ್ಣ, ನಗರಸಭೆ ಆಯುಕ್ತರಾದ ಎಂ.ಎಲ್.ರಮೇಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗುಪ್ತಾಜಿ, ಕಾರ್ಮಿಕ ಅಧಿಕಾರಿ ರಾಮಕೃಷ್ಣ, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಸೋಮಶೇಖರ್, ಅಗ್ನಿಶಾಮಕ ದಳದ ಅಧಿಕಾರಿ ಚಂದನ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಚಂದ್ರಶೇಖರ್, ತಹಶೀಲ್ದಾರ್‍ರಾದ ಗೋವಿಂದರಾಜು, ಯುನೆಸೆಫ್‍ನ ಸಮನ್ವಯಾಧಿಕಾರಿ ಪ್ರಭಾತ್, ನಟೇಶ, ನಗರಸಭೆ ಎಂಜಿನಿಯರ್ ವನಿತಾ, ಪೊಲೀಸ್ ಇನ್ಸ್‍ಪೆಕ್ಟರ್ ನಾಗೇಗೌಡ ಇತರರು ಹಾಜರಿದ್ದರು.
ಕಂಟ್ರೋಲ್ ರೂಂ ಆರಂಭ
ಪ್ರಸ್ತುತ ಬೇಸಿಗೆ ಕಾಲವಿರುವುದರಿಂದ ಎಲ್ಲಾ ಗ್ರಾಮಿಣ ಜನತೆಗೆ ಕುಡಿಯುವ ನೀರಿನ ಸಮಸ್ಯೆಯುಂಟಾಗದಂತೆ ಕ್ರಮವಹಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಮಡಿಕೇರಿ, ಸೋಮವಾರಪೇಟೆ, ಪೊನ್ನಂಪೇಟೆ ಕಚೇರಿಗಳಲ್ಲಿ ಕಂಟ್ರೋಲ್ ರೂಂ ಅನ್ನು ತೆರೆಯಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದಲ್ಲಿ ಸಾರ್ವಜನಿಕರು ಆಯಾಯ ತಾಲೂಕಿನ ಕಚೇರಿಯನ್ನು ಸಂಪರ್ಕಿಸಬಹುದು.
ಕಾರ್ಯಪಾಲಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಮಡಿಕೇರಿ ದೂ.ಸಂ: 08272-298845, ಮೊ.ಸಂ: 9448160547.
ಗವೀ ಸಿದ್ದಯ್ಯ, ಸಹಾಯಕ ಕಾರ್ಯಪಾಲಕ ಎಂಜಿನಿಯರ್(ಪ್ರಭಾರ), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಮಡಿಕೇರಿ ಕಚೇರಿ ದೂ.ಸಂ.08272-221845, ದೂ.ಸಂ.9739319768.
ಪಿ.ಎಸ್.ರಮೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್(ಪ್ರಭಾರ), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಸೋಮವಾರಪೇಟೆ. ದೂ.ಸಂಖ್ಯೆ: 08276-284422, ಮೊ.ಸಂ: 9448523387.
ಎಸ್.ಲಕ್ಷ್ಮಿಕಾಂತ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್(ಪ್ರಭಾರ) ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಪೊನ್ನಂಪೇಟೆ, ವಿರಾಜಪೇಟೆ ತಾಲ್ಲೂಕು ದೂ.ಸಂ: 08274-261053, ಮೊ.ಸಂ: 9900631584 ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ಗ್ರಾ.ಕು.ನೀ. ಮತ್ತು ನೈರ್ಮಲ್ಯ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅವರು ಕೋರಿದ್ದಾರೆ.