ಖಾಸಗಿಗಿಂತ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಅಧಿಕ!

ಬೆಂಗಳೂರು, ಎ.25: ರಾಜ್ಯ ಸರಕಾರದ ಶಿಕ್ಷಣ ಇಲಾಖೆ ನಡೆಸಿದ 2018-19 ನೆ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ಖಾಸಗಿ ಶಾಲೆಗಳಿಗೆ ಹೊಲಿಸಿದರೆ ಸರಕಾರಿ ಶಾಲೆಗಳಲ್ಲಿ ಹೆಚ್ಚಿನ ಶಿಕ್ಷಕರಿರುವ ಅಂಶ ವರದಿಯಲ್ಲಿ ಬಹಿರಂಗವಾಗಿದೆ.
2018-19ನೇ ಸಾಲಿನ ವರದಿಯಲ್ಲಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 26 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿದ್ದಾರೆ. ಆದರೆ, ಅನುದಾನಿತ ಶಾಲೆಯಲ್ಲಿ 55:1, ಖಾಸಗಿ ಶಾಲೆಯಲ್ಲಿ 31:1 ಅನುಪಾತ ಇದೆ. ಅಲ್ಲದೆ, ಶಿಕ್ಷಣ ಇಲಾಖೆ 28 ಸಾವಿರ ಶಿಕ್ಷಕರ ಕೊರತೆ ಎದುರಿಸುತ್ತಿದೆ. ಹೀಗಾಗಿ, ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ವರ್ಗಾವಣೆ ಮಾಡುತ್ತಿದೆ. ಜತೆಗೆ, ಈ ವರ್ಷ ಶಿಕ್ಷಣ ಇಲಾಖೆ ಹೊಸದಾಗಿ 10 ಸಾವಿರ ಪ್ರಾಥಮಿಕ ಪದವೀಧರ ಶಿಕ್ಷಕರ ನೇಮಕ ಪ್ರಕ್ರಿಯೆಯನ್ನೂ ನಡೆಸುತ್ತಿದೆ.
ವಿದ್ಯಾರ್ಥಿಗಳ ಕೊರತೆ: ರಾಜ್ಯದಲ್ಲಿ 14,712 ಪ್ರಾಥಮಿಕ ಶಾಲೆಗಳಲ್ಲಿ 30ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಗಳಲ್ಲಿ 25,500 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದನ್ನು ಸರಿದೂಗಿಸುವ ಹಿನ್ನೆಲೆಯಲ್ಲಿ ಕಳೆದ ವರ್ಷ 28 ಸಾವಿರ ಶಾಲೆಗಳನ್ನು ಹತ್ತಿರದ 8 ಸಾವಿರ ಶಾಲೆಗಳಲ್ಲಿ ವಿಲೀನ ಮಾಡಲು ಸರಕಾರ ಮುಂದಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾದ್ದರಿಂದ ಕೈ ಬಿಡಬೇಕಾಯಿತು.
ಪಿಯು ಕಾಲೇಜುಗಳ ಸ್ಥಿತಿ: ಸರಕಾರಿ ಮತ್ತು ಖಾಸಗಿ ಪಿಯು ಕಾಲೇಜುಗಳ ಬೆಳವಣಿಗೆ ಗಮನಿಸಿದಾಗ ಖಾಸಗಿ ಕಾಲೇಜುಗಳು ಸರಕಾರಿ ಕಾಲೇಜುಗಳಿಗಿಂದ ಅಧಿಕವಿದೆ. 2010-11ನೇ ಸಾಲಿನಲ್ಲಿ 1,191 ರಷ್ಟಿದ್ದ ಸರಕಾರಿ ಪಿಯು ಕಾಲೇಜುಗಳು, 2018-19 ಕ್ಕೆ 1,231 ಕ್ಕೆ(ಶೇ.3.36) ಏರಿಕೆಯಾಗಿವೆ. ಆದರೆ, ಈ ಮಧ್ಯೆ ಖಾಸಗಿ ಕಾಲೇಜುಗಳು ತೀವ್ರ ಪ್ರಮಾಣದಲ್ಲಿ ಅಧಿಕಗೊಂಡಿವೆ.
2010-11ರಲ್ಲಿ 1,737 ಇದ್ದ ಪಿಯು ಕಾಲೇಜುಗಳು 2018-19ರಲ್ಲಿ 3,194 ಕಾಲೇಜುಗಳಿಗೆ ಏರಿಕೆಯಾಗಿದೆ. ಅನುದಾನಿತ ಕಾಲೇಜುಗಳು 640ರಿಂದ 797 ಕ್ಕೆ ಏರಿಕೆಯಾಗಿವೆ. ಕಾರ್ಪೊರೇಷನ್ ಕಾಲೇಜುಗಳು 8 ವರ್ಷದಿಂದ 13 ಇವೆ.
ಕಾಲೇಜುಗಳ ಆರಂಭಕ್ಕೆ ಅರ್ಜಿ: ರಾಜ್ಯದಲ್ಲಿ ಹೊಸದಾಗಿ ಪಿಯು ಕಾಲೇಜುಗಳ ಆರಂಭಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಅಧಿಕ ಸಂಖ್ಯೆಯಲ್ಲಿ ಅರ್ಜಿಗಳು ಹರಿದುಬರುತ್ತಿವೆ. ಖಾಸಗಿ ಕಾಲೇಜುಗಳು ಹೆಚ್ಚಾಗುವುದರಿಂದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳಲು ಕಷ್ಟವಾಗುತ್ತದೆ. ಅಲ್ಲದೆ, ಬಹುತೇಕ ಸರಕಾರಿ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗಗಳಿಲ್ಲ, ಇದ್ದರೂ ಮೂಲಭೂತ ಸೌಲಭ್ಯಗಳ ಕೊರತೆಯಿಂದ ನರಳುತ್ತಿವೆ. ಆದುದರಿಂದಾಗಿ ಅಧಿಕ ಸಂಖ್ಯೆಯಲ್ಲಿ ಖಾಸಗಿ ಕಾಲೇಜುಗಳತ್ತ ಮುಖ ಮಾಡುತ್ತಿದ್ದಾರೆ.







