ನೀರವ್ ಮೋದಿ ಜಾಮೀನು ಅರ್ಜಿ ತಿರಸ್ಕೃತ

ಲಂಡನ್, ಎ.26: ದೇಶಭ್ರಷ್ಟ ವಜ್ರ ಉದ್ಯಮಿ ನೀರವ್ ಮೋದಿ ಜಾಮೀನು ಅರ್ಜಿಯನ್ನು ಲಂಡನ್‌ನ ನ್ಯಾಯಾಲಯ ಮೂರನೇ ಬಾರಿ ತಿರಸ್ಕರಿಸಿದ್ದು, ನೀರವ್ ಮೋದಿ ಮುಂದಿನ ವಿಚಾರಣಾ ದಿನವಾದ ಮೇ 24ರವರೆಗೆ ಜೈಲಿನಲ್ಲಿಯೇ ಇರಬೇಕಾಗಿದೆ.
ಭಾರತದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ.ಗೂ ಹೆಚ್ಚು ಹಣವನ್ನು ವಂಚಿಸಿರುವ ಆರೋಪದಲ್ಲಿ ಮಾರ್ಚ್ 19ರಂದು ಲಂಡನ್‌ನಲ್ಲಿ ನೀರವ್ ಮೋದಿ ಬಂಧನವಾಗಿತ್ತು. ಮೋದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವೆಸ್ಟ್‌ಮಿನಿಸ್ಟರ್ ಕೋರ್ಟ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಮಾರ್ಚ್ 29ರವರೆಗೆ ಕಸ್ಟಡಿಗೆ ಒಪ್ಪಿಸಲಾಗಿತ್ತು. ಮೋದಿ ಎರಡನೇ ಬಾರಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ವೆಸ್ಟ್‌ಮಿನಿಸ್ಟರ್ ಕೋರ್ಟ್ ಮಾರ್ಚ್ 29ರಂದು ನಡೆಸಿತ್ತು. ಈ ವೇಳೆ ಭಾರತದ ಅಧಿಕಾರಿಗಳ ಪ್ರತಿನಿಧಿಯಾಗಿದ್ದ ‘ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್’ ಜಾಮೀನು ಅರ್ಜಿಯನ್ನು ವಿರೋಧಿಸಿ ನೀರವ್ ಮೋದಿ ವಿರುದ್ಧ ಹೆಚ್ಚುವರಿ ಸಾಕ್ಷಿಗಳನ್ನು ಒದಗಿಸಿತ್ತು. ಇದನ್ನು ಪರಿಗಣಿಸಿದ್ದ ನ್ಯಾಯಾಲಯ, ಜಾಮೀನು ದೊರೆತರೆ ನೀರವ್ ಮೋದಿ ಪಲಾಯನ ಮಾಡಬಹುದು ಮತ್ತು ಮತ್ತೊಮ್ಮೆ ಶರಣಾಗುವ ಭರವಸೆಯಿಲ್ಲ ಎಂಬ ಅನಿಸಿಕೆ ವ್ಯಕ್ತಪಡಿಸಿ ಜಾಮೀನು ನೀಡಲು ನಿರಾಕರಿಸಿತ್ತು.
2018ರ ಜನವರಿಯಲ್ಲಿ ಭಾರತದಿಂದ ಪಲಾಯನ ಮಾಡಿದ್ದ ಮೋದಿ ಲಂಡನ್‌ನ ವೆಸ್ಟ್ ಎಂಡ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ತಿಂಗಳಿಗೆ ಸುಮಾರು 15.5 ಲಕ್ಷ ರೂ. ಬಾಡಿಗೆ ನೀಡಿ ವಾಸಿಸುತ್ತಿರುವುದಾಗಿ ಬ್ರಿಟನ್‌ನ ‘ದಿ ಟೆಲಿಗ್ರಾಫ್’ ಪತ್ರಿಕೆ ಮಾರ್ಚ್‌ನಲ್ಲಿ ವರದಿ ಮಾಡಿತ್ತು. ಮಾರ್ಚ್ 9ರಂದು ಮೋದಿಯನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ವಿದೇಶ ವ್ಯವಹಾರ ಇಲಾಖೆಯು ಮಾಡಿದ್ದ ಮನವಿಗೆ ಬ್ರಿಟನ್ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರಕಿರಲಿಲ್ಲ. ಮೋದಿ ಗಡೀಪಾರಿಗೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಮಾಡಿಕೊಂಡ ಮನವಿ ಬ್ರಿಟನ್ ಸರಕಾರದ ಪರಿಶೀಲನೆಯಲ್ಲಿದೆ ಎಂದು ಭಾರತ ಸರಕಾರ ಹೇಳಿಕೆ ನೀಡಿತ್ತು.







