ಬಿಜೆಪಿ ಅಭ್ಯರ್ಥಿ ಗಂಭೀರ್ ಬಳಿ 2 ವೋಟರ್ ಐಡಿ: ದೂರು ದಾಖಲು

ಹೊಸದಿಲ್ಲಿ, ಎ.26: ಪೂರ್ವ ದಿಲ್ಲಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಗೌತಮ್ ಗಂಭೀರ್ ಅವರ ಬಳಿ ಎರಡು ಮತದಾರರ ಗುರುತು ಪತ್ರಗಳಿವೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷ ಇಂದು ದೂರು ದಾಖಲಿಸಿದೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಎಪಿಯ ಆತಿಷಿ ಮರ್ಲೇನಾ, ಗಂಭೀರ್ ಬಳಿ ದಿಲ್ಲಿಯ ಎರಡು ಪ್ರತ್ಯೇಕ ಕ್ಷೇತ್ರಗಳಾದ ಕರೋಲ್ ಭಾಗ್ ಹಾಗೂ ರಾಜೀಂದರ್ ನಗರ್ ಗಳಲ್ಲಿ ಎರಡು ಮತದಾರರ ಗುರುತು ಪತ್ರಗಳಿವೆ ಎಂದು ಹೇಳಿದ್ದಾರೆ.
“ನಾಮಪತ್ರ ಸಲ್ಲಿಕೆಯ ವೇಳೆ ನೀಡಿದ ಅಫಿದಾವತ್ ನಲ್ಲಿ ಅವರು ತಾವು ಕರೋಲ್ ಭಾಗ್ ಪ್ರದೇಶದಲ್ಲೂ ಮತ ಚಲಾಯಿಸಲು ಸಾಧ್ಯವಿರುವ ಇನ್ನೊಂದು ಮತದಾರರ ಗುರುತು ಪತ್ರ ಹೊಂದಿರುವ ವಿಚಾರವನ್ನು ಮುಚ್ಚಿಟ್ಟಿದ್ದಾರೆ ಹಾಗೂ ಇದು ಜನ ಪ್ರತಿನಿಧಿತ್ವ ಕಾಯಿದೆಯ ಸೆಕ್ಷನ್ 125ಎ ಇದರ ಉಲ್ಲಂಘನೆಯಾಗಿದ್ದು, ಇದಕ್ಕಾಗಿ ಆರು ತಿಂಗಳ ತನಕದ ಜೈಲು ಶಿಕ್ಷೆಯಾಗಬಹುದು” ಎಂದು ಆತಿಷಿ ಸುದ್ದಿಗೋಠಿಯಲ್ಲಿ ಹೇಳಿದ್ದಾರೆ.
ಕರೋಲ್ ಭಾಗ್ ಮತ್ತು ರಾಜಿಂದರ್ ನಗರ್ ಗಳ ಮತದಾರರ ಪಟ್ಟಿಗಳ ಎರಡು ಫೋಟೋಗಳನ್ನೂ ಅವರು ಟ್ವೀಟ್ ಮಾಡಿದ್ದು ಎರಡು ಪಟ್ಟಿಗಳಲ್ಲೂ ಗಂಭೀರ್ ಹೆಸರಿದೆ.
ಪ್ರಧಾನಿ ನರೇಂದ್ರ ಮೋದಿಯಿಂದ ತಾನು ಪ್ರಭಾವಿತನಾಗಿದ್ದೇನೆ ಎಂದು ಹೇಳಿಕೊಂಡು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮಾರ್ಚ್ 22ರಂದು ಬಿಜೆಪಿ ಸೇರಿದ್ದರು. ಪೂರ್ವ ದಿಲ್ಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ಮುನ್ನ ಮಂಗಳವಾರ ಗಂಭೀರ್ ರಾಜಧಾನಿಯಲ್ಲಿ ರೋಡ್ ಶೋ ಕೂಡ ನಡೆಸಿದ್ದರು. ಕ್ಷೇತ್ರದ ಹಾಲಿ ಸಂಸದ ಮಹೇಶ್ ಗಿರಿ ಬದಲು ಬಿಜೆಪಿ ಈ ಬಾರಿ ಗಂಭೀರ್ ಗೆ ಅವಕಾಶ ನೀಡಿದೆ.







