ದಕ್ಷಿಣ ವಿಭಾಗ ಪೊಲೀಸರ ಕಾರ್ಯಾಚರಣೆ: 7 ಜನರ ಸೆರೆ, 63 ಲಕ್ಷ ಮೌಲ್ಯದ ಮಾಲು ಜಪ್ತಿ

ಬೆಂಗಳೂರು, ಎ.26: ಗುರೂಜಿ ಜೊತೆ ಸೇರಿಕೊಂಡು ಮನೆಯಲ್ಲಿ ದೋಷ, ಗಂಡಾಂತರ ಇದೆ ಪೂಜೆ ಮಾಡಬೇಕೆಂದು ನಂಬಿಸಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಆರೋದಪಡಿ ಇಬ್ಬರು ಸೇರಿ 7 ಜನರನ್ನು ಬಂಧಿಸಿರುವ ವಿವಿ ಪುರಂ ಉಪ ವಿಭಾಗದ ಪೊಲೀಸರು 63 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.
ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ, ಆಂಧ್ರಪ್ರದೇಶದ ಅದೋನಿಯ ಚೇತನ್ ಯಾಣೆ ಚಂದ್ರಖಾನ್ ಧಾಗೆ(37), ರಾಜೇಶ್ ಗಣಪತ್ ರಾವ್ ಥಾಂಬೆ(55)ನನ್ನು ಬಂಧಿಸಿ 925 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಬಂಧಿತರಿಬ್ಬರು ಮಹಾರಾಷ್ಟ್ರದ ಪೂನಾದ ಅನಾಶ್ ಸುರೇಶ್ ಕಾನ್‌ಲ್ಕರ್ ಯಾನೆ ಗುರೂಜಿ ಎಂಬಾತನ ಜೊತೆ ಸೇರಿಕೊಂಡು ಚೆನ್ನಮ್ಮನ ಕೆರೆ ಅಚ್ಚುಕಟ್ಟು, ಗಿರಿನಗರ, ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚರಿಸುತ್ತಾ ಒಂಟಿ ಹಾಗೂ ಶ್ರೀಮಂತರ ಮನೆಯನ್ನು ಗುರುತಿಸಿ ನಿಮ್ಮ ಮನೆಯಲ್ಲಿ ದೋಷ, ಗಂಡಾಂತರವಿದೆ ಎಂದು ನಂಬಿಸಿ, ಪೂಜಾ ಕೈಂಕರ್ಯಗಳನ್ನು ನಡೆಸುವ ವೇಳೆ ಚಿನ್ನಾಭರಣ ಕಸಿದು ಪರಾರಿಯಾಗುತ್ತಿದ್ದ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದರು.
ಕೃತ್ಯದ ಪ್ರಮುಖ ಆರೋಪಿ ಗುರೂಜಿ ಪುಣೆಯಲ್ಲಿ ಅಡಗಿರುವ ಮಾಹಿತಿ ಇದ್ದು, ಆತನ ಬಂಧನಕ್ಕೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದ್ದು, ಆದಷ್ಟು ಶೀಘ್ರ ಬಂಧಿಸಲಾಗುವುದು ಎಂದು ಅವರು ತಿಳಿಸಿದರು. ಅದೇ ರೀತಿ, ಮನೆಗಳ್ಳತನ ಪ್ರಕರಣ ಸಂಬಂಧ ಕೆಂಪೇಗೌಡ ನಗರ ಪೊಲೀಸರು ಗವಿ ಪುರಂನ ರಾಮಕೃಷ್ಣ ಆಶ್ರಮ ರಸ್ತೆಯ ಅಜಿತ್ ಕುಮಾರ್ ಯಾನೆ ಜೊಲ್ಲು(20), ಕೆಜಿ ನಗರದ ಭವಾನಿ ನಗರದ ರಾಜು(23) ಹಾಗೂ ಅಪ್ಪುಎಂಬಾತನನ್ನು ಬಂಧಿಸಿ 900 ಗ್ರಾಂ ಚಿನ್ನಾಭರಣ, ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ.
ರಾತ್ರಿ ವೇಳೆ ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಬೆದರಿಸಿ 40 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಪ್ರಕರಣ ದಾಖಲಿಸಿಕೊಂಡಿದ್ದ ಕೆಂಪೇಗೌಡ ನಗರ ಪೊಲೀಸರು, ಜೊಲ್ಲು ಹಾಗೂ ರಾಜು ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿಗಳ ಜೊತೆ ಇದ್ದ ವೀರಮಣಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು,
ಗಿರಿ ನಗರ ಠಾಣಾ ಪೊಲೀಸರು, ಅಂಚೆಪಾಳ್ಯದ ಅರಳಿಮರ ರಸ್ತೆಯ ಶಿವರಾಜ(27), ಜಯನಗರದ ಪೈಪ್‌ಲೇನ್ ರಸ್ತೆಯ ಅರುಣ್ ಎಂಬುವರನ್ನು ಬಂಧಿಸಿ 5 ಲಕ್ಷ ಮೌಲ್ಯದ 91 ಗ್ರಾಂ ಚಿನ್ನಾಭರಣ, 2 ಡೈಮೆಂಡ್ ಮೂಗುತಿ, ಅರ್ಧ ಕೆಜಿ ಬೆಳ್ಳಿ, ಬೆಳ್ಳಿ ಲೇಪನವಿರುವ ಆಭರಣಗಳು, 27 ಸಾವಿರ ನಗದು, ಕಾರು ಜಪ್ತಿ ಮಾಡಿದ್ದಾರೆ.
ಬಂಧಿತರ ವಿರುದ್ಧ ಗಿರಿನಗರ, ನೆಲಮಂಗಲ, ದಾವಣಗೆರೆ, ಮೈಸೂರು ಸೇರಿ 5 ಕಡೆಗಳಲ್ಲಿ ಕಳವು ಪ್ರಕರಣ ಪತ್ತೆಯಾಗಿದೆ ಎಂದು ಅಣ್ಣಾಮಲೈ ತಿಳಿಸಿದರು.







