ಯುವಕನ ಕೊಲೆ ಪ್ರಕರಣ: 6 ಜನರ ಬಂಧನ

ಬೆಂಗಳೂರು, ಎ.26: ಸ್ನೇಹಿತನ ಜತೆ ನಡೆದುಕೊಂಡು ಮನೆಗೆ ಬರುತ್ತಿದ್ದ ವಿಘ್ನೇಶ್ ಎಂಬಾತನನ್ನು ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದ ಪ್ರಕರಣ ಸಂಬಂಧ 6 ಜನರನ್ನು ಇಲ್ಲಿನ ಜೆಸಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಜೆಸಿ ನಗರದ ಮುಖೇಶ್(38), ಸಂತೋಷ್(37), ಚೇತನ್(22), ಆರ್‌ಟಿ ನಗರದ ಸಂದೀಪ್(29), ಸೋಮಯ್ಯ(25), ಯೋಗೇಶ್(30) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹೇಳಿದ್ದಾರೆ.
ಕಳೆದ ಎ.21 ರಂದು ರಾತ್ರಿ ವಿಘ್ನೇಶ್(20) ಮನೆಗೆ ಸ್ನೇಹಿತನ ಜತೆ ಬರುತ್ತಿದ್ದಾಗ ಜೆಸಿ ನಗರದ ಪಿಜಿ ರಸ್ತೆಯ ರಾಮಕೃಷ್ಣಬ್ಲಾಕ್‌ನಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ ಜೆಸಿ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಮಂಜಯ್ಯ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ.





