ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣಾ ಕಾರ್ಯಕ್ಕೆ ತೆರೆಮರೆಯಲ್ಲೇ ಚಾಲನೆ

ಬೆಂಗಳೂರು, ಎ.26: ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಮುಂದಿನ ವರ್ಷ ಆಗಸ್ಟ್‌ನಲ್ಲಿ ನಡೆಯಲಿರುವ ಬಿಬಿಎಂಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಾರ್ಡ್ ಪುನರ್‌ವಿಂಗಡಣಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ವಾರ್ಡ್ ಪುನರ್‌ವಿಂಗಡಣೆ ಕುರಿತಂತೆ ನಗರ ಜಿಲ್ಲಾಡಳಿತದ ಉಪ ಆಯುಕ್ತರು ಸಲ್ಲಿಸಿರುವ ಪ್ರಸ್ತಾವನೆ ಮೇರೆಗೆ ನಗರಾಭಿವೃದ್ದಿ ಇಲಾಖೆ ಈಗಾಗಲೇ ಹಲವಾರು ಸಭೆ ನಡೆಸಿದ್ದು, ಮುಂದಿನ ತಿಂಗಳು ಪುನರ್ ವಿಂಗಡಣಾ ಕಾರ್ಯಕ್ಕೆ ಚಾಲನೆ ನೀಡಲಿದೆ.
ಕಳೆದ 2010ರಲ್ಲಿ ಬಿಬಿಎಂಪಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಜನಗಣತಿ ಕಾರ್ಯ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ವಾರ್ಡ್ ಪುನರ್ ವಿಂಗಡಣೆ ಮಾಡದೆ ಚುನಾವಣೆ ನಡೆಸಲಾಗಿತ್ತು. 2011ರಲ್ಲಿ ಜನಗಣತಿ ನಡೆದಿದ್ದರೂ 2015ರ ಚುನಾವಣೆ ಸಂದರ್ಭದಲ್ಲೂ ಜನಗಣತಿ ಆಧಾರದ ಮೇಲೆ ಎಲೆಕ್ಷನ್ ನಡೆದಿರಲಿಲ್ಲ. ಇದೀಗ 2020ರ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ವಾರ್ಡ್ ಪುನರ್ ವಿಂಗಡಣೆ ಮಾಡಲಾಗುತ್ತಿದೆ. ಹಾಲಿ ಇರುವ 198 ವಾರ್ಡ್‌ಗಳನ್ನು ಹಾಗೇ ಉಳಿಸಿಕೊಂಡು 2011ರ ಜನಗಣತಿ ಆಧಾರದ ಮೇಲೆ ಅಂದಾಜು 40 ಸಾವಿರ ಮತದಾರರ ಆಧಾರದ ಮೇಲೆ ವಾರ್ಡ್ ಪುನರ್ ವಿಂಗಡಣೆ ಮಾಡಲಾಗುತ್ತದೆ.
ಅತಿಹೆಚ್ಚು ಮತದಾರರು ಇರುವ ಪ್ರದೇಶಗಳನ್ನು ಕಡಿಮೆ ಮತದಾರರು ಇರುವ ವಾರ್ಡ್‌ಗೆ ಸೇರ್ಪಡೆ ಮಾಡಿ ಮತದಾರರ ಅಸಮತೋಲನವನ್ನು ಸರಿಪಡಿಸಲಾಗುತ್ತಿದೆ. ಕೆಲವಾರ್ಡ್‌ಗಳು ಅತಿ ಹೆಚ್ಚು ಮತದಾರರನ್ನು ಹೊಂದಿದ್ದರೆ ಇನ್ನು ಕೆಲವು ಕಡಿಮೆ ಮತದಾರರನ್ನು ಹೊಂದಿದೆ.
ಹೊರಮಾವಿನಲ್ಲಿ ಸರಿಸುಮಾರು 97 ಸಾವಿರ ಮತದಾರರು ಇದ್ದರೆ, ಮಾರಪ್ಪನಪಾಳ್ಯ ವಾರ್ಡ್‌ನಲ್ಲಿ ಕೇವಲ 23 ಸಾವಿರ ಮತದಾರರಿದ್ದಾರೆ. ಇದೇ ರೀತಿ 198 ವಾರ್ಡ್‌ಗಳಲ್ಲೂ ಮತದಾರರ ಅಸಮತೋಲನವಿದ್ದು, 40 ಸಾವಿರ ಜನಸಂಖ್ಯೆಗೆ ಒಂದು ವಾರ್ಡ್‌ನಂತೆ ಪುನರ್ ವಿಂಗಡಣೆ ಮಾಡಲಾಗುತ್ತಿದೆ.
ಅಲ್ಲಗಳೆಯುವಂತಿಲ್ಲ: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹಾಲಿ ಇರುವ 198 ವಾರ್ಡ್‌ಗಳನ್ನು ಹಾಗೆಯೇ ಉಳಿಸಿಕೊಂಡು ವಾರ್ಡ್ ಪುನರ್ ವಿಂಗಡಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಆದರೆ ವಾರ್ಡ್‌ಗಳ ಸಂಖ್ಯೆ ಹೆಚ್ಚಳಗೊಂಡರೂ ಅಚ್ಚರಿ ಪಡುವಂತಿಲ್ಲ.
ಚುನಾವಣಾ ಆಯೋಗ ಮನವಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಜನಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 2011ರ ಜನಗಣತಿ ಆಧಾರದ ಮೇಲೆ ಶೇ.10ರಷ್ಟು ವಾರ್ಡ್‌ಗಳನ್ನು ಹೆಚ್ಚಿಸಬೇಕೆಂದು ಚುನಾವಣಾ ಆಯೋಗ ಸರಕಾರಕ್ಕೆ ಮನವಿ ಮಾಡಿಕೊಂಡಿದೆ ಎನ್ನಲಾಗಿದೆ.
ಸುತ್ತಮುತ್ತಲ ಪ್ರದೇಶ ಸೇರ್ಪಡೆ: 2011ರ ಜನಗಣತಿಯಂತೆ ನಗರದಲ್ಲಿ ಕೇವಲ 88 ಲಕ್ಷ ಜನಸಂಖ್ಯೆಯಿತ್ತು. ಆದರೆ ಇತ್ತೀಚೆಗೆ ನಗರದ ಜನಸಂಖ್ಯೆ 1.39 ಕೋಟಿಯಷ್ಟು ಹೆಚ್ಚಳವಾಗಿದೆ. ಹೀಗಾಗಿ ನಗರದ ಸುತ್ತಮುತ್ತಲ ಕೆಲ ಪ್ರದೇಶಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆ ಮಾಡಿ ಹಾಲಿ ಇರುವ 198 ವಾರ್ಡ್‌ಗಳಿಗೆ ಮತ್ತೆ 20 ವಾರ್ಡ್‌ಗಳಷ್ಟು ಸೇರ್ಪಡೆ ಮಾಡುವುದು ಸೂಕ್ತ ಎಂದು ಆಯೋಗ ಸಲಹೆ ನೀಡಿದೆ. ಆಯೋಗದ ಸಲಹೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದರೆ ಹಾಲಿ ಇರುವ 198 ವಾರ್ಡ್‌ಗಳಿಗೆ ಮತ್ತೆ 20 ವಾರ್ಡ್‌ಗಳು ಸೇರ್ಪಡೆಗೊಂಡರೂ ಅಚ್ಚರಿ ಇಲ್ಲ.
ವಿಭಜನೆಯಾಗುವುದೇ?: 2015ರಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಯುವ ಸಂದರ್ಭದಲ್ಲೇ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದ ದೃಷ್ಟಿಯಿಂದ 800 ಕಿ.ಮೀ ಸುತ್ತಳತೆ ಇರುವ ಬಿಬಿಎಂಪಿಯನ್ನು ವಿಭಜನೆ ಮಾಡಲು ಮುಂದಾಗಿದ್ದರು. ಅಲ್ಲದೆ, ಬಿಬಿಎಂಪಿ ವಿಭಜನೆ ದೃಷ್ಟಿಯಿಂದಲೇ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ನೇತೃತ್ವದ ತ್ರಿಸದಸ್ಯ ಸಮಿತಿಯೊಂದನ್ನು ಸಿದ್ದರಾಮಯ್ಯ ನಿಯೋಜಿಸಿದ್ದರು.
ಸಾಧಕ-ಬಾಧಕಗಳನ್ನು ಪರಿಶೀಲಿಸಿದ ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿ ಆಡಳಿತಾತ್ಮಕ ದೃಷ್ಟಿಯಿಂದ ಬಿಬಿಎಂಪಿಯನ್ನು 3 ಇಲ್ಲವೇ ನಾಲ್ಕು ವಿಭಾಗಗಳಾಗಿ ವಿಭಜಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತ್ತು. ಆದರೆ ಕೆಲವು ಆಡಳಿತಾತ್ಮಕ ದೋಷದಿಂದ ವಿಭಜನೆಯನ್ನು ಕೈಬಿಟ್ಟು 2015ರಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸಲಾಗಿತ್ತು. ಇದೀಗ ಬಿಬಿಎಂಪಿಗೆ ಮತ್ತೊಂದು ಚುನಾವಣೆಗೆ ಕಾಲ ಸನ್ನಿಹಿತವಾಗಿದ್ದು, ಮತ್ತೆ ಬಿಬಿಎಂಪಿ ವಿಭಜನೆ ವಿಚಾರ ಮುನ್ನಲೆಗೆ ಬರುವ ಸಾಧ್ಯತೆ ಇದೆ.
ಮಹಾನಗರ ಪಾಲಿಕೆಯಾಗಿದ್ದ ನಗರವನ್ನು ಬಿಬಿಎಂಪಿಯಾಗಿ ಪರಿವರ್ತಿಸಿದ ಕೀರ್ತಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸಲ್ಲುತ್ತದೆ. ಇದೀಗ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದರಿಂದ ಬಿಬಿಎಂಪಿಯನ್ನು ಹಾಗೇ ಉಳಿಸಿಕೊಂಡು ವಾರ್ಡ್ ಪುನರ್ ವಿಂಗಡಣೆ ಆಧಾರದ ಮೇಲೆ ಚುನಾವಣೆ ನಡೆಸುತ್ತಾರೋ ಅಥವಾ ಆಡಳಿತಾತ್ಮಕ ದೃಷ್ಟಿಯಿಂದ ಬಿಬಿಎಂಪಿಯನ್ನು ವಿಭಜನೆ ಮಾಡುತ್ತಾರೋ ಎಂಬುದು ಕುತೂಹಲ ಕೆರಳಿಸಿದೆ.







