‘ದೈನಿಕ್ ಅಸೋಮ್’ನ ಪತ್ರಕರ್ತನ ಮೇಲೆ ಹಲ್ಲೆ

ಗುವಾಹಟಿ,ಎ.26: ಅಸ್ಸಾಮಿನ ಪ್ರಮುಖ ದೈನಿಕವಾಗಿರುವ ‘ದೈನಿಕ್ ಅಸೋಮ್’ನ ಪತ್ರಕರ್ತ ರಾಜನ್ ಡೇಕಾ ಅವರ ಮೇಲೆ ಗುರುವಾರ ರಾತ್ರಿ ಮಾರಣಾಂತಿಕ ಹಲ್ಲೆ ನಡೆದಿದೆ.
ನಲ್ಬಾರಿ ನಿವಾಸಿ ಡೇಕಾ ಮನೆಗೆ ಮರಳುತ್ತಿದ್ದಾಗ ವ್ಯಕ್ತಿಯೋರ್ವ ದೊಣ್ಣೆಯಿಂದ ಅವರನ್ನು ಥಳಿಸಿದ್ದು, ಗಾಯಗೊಂಡಿರುವ ಅವರನ್ನು ಗುವಾಹಟಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಲ್ಬಾರಿ ಎಸ್‌ಪಿ ಅಮನಜಿತ್ ಕೌರ್ ಅವರು ತಿಳಿಸಿದರು.
ಡೇಕಾರ ಪತ್ರಕರ್ತ ವೃತ್ತಿಗೂ ಹಲ್ಲೆಗೂ ನಂಟು ಕಲ್ಪಿಸುವ ಸಾಕ್ಷಾಧಾರಗಳು ಇನ್ನೂ ಲಭಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಎ.24ರಂದು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದಿದ್ದ ಘರ್ಷಣೆಯನ್ನು ಡೇಕಾ ವರದಿ ಮಾಡಿದ ಬಳಿಕ ಅವರ ವಿರುದ್ಧ ಅಭಿಯಾನವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಆರಂಭಗೊಂಡಿತ್ತು. ಡೇಕಾಗೆ ಪಾಠವನ್ನು ಕಲಿಸುವುದಾಗಿ ಬೆದರಿಕೆಗಳು ಹರಿದಾಡುತ್ತಿದ್ದವು ಎಂದು ದೈನಿಕದ ಸಂಪಾದಕ ಮುನಿನ್ ಬಯನ್ ತಿಳಿಸಿದರು.
ಹಲ್ಲೆಯ ಹಿಂದೆ ಬಿಜೆಪಿಯ ಕೈವಾಡವಿದೆ. ಪೊಲೀಸರು ಹೇಳಿರುವಂತೆ ಹಲ್ಲೆಕೋರ ಒಬ್ಬನೇ ಇರಲಿಲ್ಲ. ಪೊಲೀಸರು ಬಿಜೆಪಿಯ ಸೂಚನೆಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಸ್ಥಳೀಯ ವರದಿಗಾರ ಮುಜೀಬುರ್ ರೆಹಮಾನ್ ಅವರು, ಹಲ್ಲೆಕೋರರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಮತ್ತು ಅವರ ಪೈಕಿ ಇಬ್ಬರನ್ನು ಡೇಕಾ ಗುರುತಿಸಿದ್ದಾರೆ ಎಂದರು.







