ಸುಪ್ರೀಂ ಕೋರ್ಟ್ ಸ್ಥಾಪಿತ ಪದ್ಧತಿಯನ್ನು ಅನುಸರಿಸಬೇಕು: ಮಹಿಳಾ ನ್ಯಾಯವಾದಿಗಳು
ಸಿಜೆಐ ವಿರುದ್ಧ ಆರೋಪಗಳ ವಿಚಾರಣೆ

ಹೊಸದಿಲ್ಲಿ,ಎ.26: ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಅವರ ವಿರುದ್ಧದ ಲೈಂಗಿಕ ಕಿರುಕುಳಗಳ ಕುರಿತು ವಿಚಾರಣೆಯಲ್ಲಿ ಸ್ಥಾಪಿತ ಪದ್ಧತಿಯನ್ನು ಅನುಸರಿಸುವಂತೆ ‘ದಿ ವಿಮೆನ್ ಇನ್ ಕ್ರಿಮಿನಲ್ ಲಾ ಅಸೋಸಿಯೇಷನ್’ನ ಮಹಿಳಾ ನ್ಯಾಯವಾದಿಗಳು ಆಗ್ರಹಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯವು ಆರೋಪಗಳ ವಿಚಾರಣೆಗಾಗಿ ತನ್ನ ಮೂವರು ನ್ಯಾಯಾಧೀಶರ ಸಮಿತಿಯೊಂದನ್ನು ರಚಿಸಿದೆ.
ತನ್ನ ಬಹಿರಂಗ ಪತ್ರದಲ್ಲಿ ‘ಆಂತರಿಕ ವಿಚಾರಣೆ ಪದ್ಧತಿ’ಯನ್ನು ಪ್ರಸ್ತಾಪಿಸಿರುವ ಅಸೋಸಿಯೇಷನ್,ಇದು ನ್ಯಾಯಾಲಯದ ಹಾಲಿ ನ್ಯಾಯಾಧೀಶರ ವಿರುದ್ಧ ದುರ್ವರ್ತನೆಯ ಆರೋಪಗಳನ್ನು ಮಾಡಿದಾಗ ಆಂತರಿಕ ಪ್ರಕ್ರಿಯೆಯನ್ನು ಒಳಗೊಂಡಿದೆ, ಆದರೆ ಮುಖ್ಯ ನ್ಯಾಯಾಧೀಶರ ವಿರುದ್ಧ ಆರೋಪಗಳನ್ನು ಮಾಡಿದಾಗ ಸಮಿತಿಯನ್ನು ರಚಿಸುವ ಅವಕಾಶವನ್ನು ಒದಗಿಸಿಲ್ಲ ಎಂದು ಬೆಟ್ಟು ಮಾಡಿದೆ.
ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ(ತಡೆ,ನಿಷೇಧ ಮತ್ತು ಪರಿಹಾರ) ಕಾಯ್ದೆ,2013ರ ತತ್ತ್ವಗಳನ್ನು ಪ್ರಸ್ತಾಪಿಸಿರುವ ಅಸೋಸಿಯೇಷನ್,ಸಮಿತಿಯು ಲೈಂಗಿಕ ಕಿರುಕುಳದ ವಿರುದ್ಧ ಹೋರಾಟದ ಕ್ಷೇತ್ರದಲ್ಲಿ ಅನುಭವವಿರುವ ಬಾಹ್ಯ ತಟಸ್ಥ ಸದಸ್ಯರೋರ್ವರನ್ನು ಕಡ್ಡಾಯವಾಗಿ ಒಳಗೊಂಡಿರಬೇಕು ಎಂದು ಹೇಳಿದೆ. ಸಮಿತಿಯ ಸದಸ್ಯರು ದೂರುದಾರರು ಮತ್ತು ಪ್ರತಿವಾದಿಗಳ ಬಗ್ಗೆ ಯಾವುದೇ ಪಕ್ಷಪಾತ ಮತ್ತು ಪ್ರಭಾವದಿಂದ ಮುಕ್ತರಾಗಿರಬೇಕು. ಪ್ರಸಕ್ತ ಪ್ರಕರಣದ ವಿಚರಣೆಯನ್ನು ನಿವೃತ್ತ ನ್ಯಾಯಾಧೀಶರು ಮತ್ತು ಬಾಹ್ಯ ಸದಸ್ಯರಿಂದ ನಡೆಸಬೇಕು ಎಂದು ಆಗ್ರಹಿಸಿದೆ.
ಸಮಿತಿಯಲ್ಲಿ ಹಾಲಿ ನ್ಯಾಯಾಧೀಶರು ಮಾತ್ರ ಇರುವುದರಿಂದ ಮತ್ತು ಅವರು ಸರ್ವೋಚ್ಚ ನ್ಯಾಯಾಲಯದ ದೈನಂದಿನ ಕರ್ತವ್ಯಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಅವರ ನಿಕಟ ಸಂವಾದವನು ಪರಿಗಣಿಸಿದರೆ ನ್ಯಾಯಸಮ್ಮತ ವಿಚಾರಣೆ ನಡೆಯುವ ಬಗ್ಗೆ ಶಂಕೆಯು ಮೂಡಿರುವುದು ಸಹಜವೇ ಆಗಿದೆ ಎಂದು ಈ ಮಹಿಳಾ ನ್ಯಾಯವಾದಿಗಳು ಹೇಳಿದ್ದಾರೆ.