ನಿಷ್ಕ್ರಿಯ ಅಧಿಕಾರಿಗಳನ್ನು ಗುರುತಿಸಲು ಕೇಂದ್ರದ ಉಪಕ್ರಮ: 1,100 ಐಎಎಸ್ ಅಧಿಕಾರಿಗಳ ಸೇವಾ ದಾಖಲೆ ಪರಿಶೀಲನೆ

ಹೊಸದಿಲ್ಲಿ, ಎ.26: ನಿಷ್ಕ್ರಿಯರಾಗಿರುವ ಅಧಿಕಾರಿಗಳನ್ನು ಗುರುತಿಸಲು ಕೇಂದ್ರ ಸರಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ 1,100ಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳ ಸೇವಾ ದಾಖಲೆಗಳನ್ನು ಪರಿಶೀಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
25 ವರ್ಷದ ಸೇವಾವಧಿ ಪೂರೈಸಿದ ಅಥವಾ 50 ವರ್ಷ ವಯಸ್ಸಾದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಕಠಿಣ ಮಾನದಂಡದ ಅನ್ವಯ ಈ ಪರಿಶೀಲನೆ ನಡೆದಿದೆ. ಅಖಿಲ ಭಾರತ ಸೇವೆ ಕಾಯ್ದೆ 1958ರ 16(3) ನಿಯಮದಡಿ 2015ರಿಂದ 2018ರ ಅವಧಿಯಲ್ಲಿ ನಿಷ್ಕ್ರಿಯ ಅಧಿಕಾರಿಗಳನ್ನು ಗುರುತಿಸುವ ಉಪಕ್ರಮದಡಿ 1,143 ಐಎಎಸ್ ಅಧಿಕಾರಿಗಳ ಸೇವಾ ದಾಖಲೆ ಪರಿಶೀಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಯಮದಡಿ, ಕೇಂದ್ರ ಸರಕಾರವು ರಾಜ್ಯ ಸರಕಾರದೊಂದಿಗೆ ಸಮಾಲೋಚಿಸಿ, ಅಧಿಕಾರಿಗೆ 3 ತಿಂಗಳ ಪೂರ್ವಾನ್ವಯ ನೋಟಿಸ್ ನೀಡಿ ಜನಹಿತದ ದೃಷ್ಟಿಯಿಂದ ನಿವೃತ್ತಿಯಾಗುವಂತೆ ತಿಳಿಸಬಹುದಾಗಿದೆ.
1,143 ಅಧಿಕಾರಿಗಳಲ್ಲಿ ಇಬ್ಬರು ಛತ್ತೀಸ್‌ಗಢ ಪದವೃಂದದವರು. ಅರುಣಾಚಲ ಪ್ರದೇಶ, ಗೋವಾ, ಮಿರೆರಾಂ ಮತ್ತು ಕೇಂದ್ರಾಡಳಿತ ಪ್ರದೇಶ ಪದವೃಂದಕ್ಕೆ ಸೇರಿದ ತಲಾ ಒಬ್ಬ ಅಧಿಕಾರಿಗಳಿಗೆ ಸಾರ್ವಜನಿಕ ಹಿತಾಸಕ್ತಿಯ ನಿಟ್ಟಿನಲ್ಲಿ ಸೇವಾ ನಿವೃತ್ತಿ ಪಡೆಯಲು ಸೂಚಿಸಲಾಗಿದೆ. ಕೇಂದ್ರದ ಜ್ಞಾಪಕ ಪತ್ರದ ಹೊರತಾಗಿಯೂ ಹಲವು ರಾಜ್ಯಗಳು ಪರಿಶೀಲನೆ ನಡೆಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ ಆಂಧ್ರಪ್ರದೇಶ, ಜಮ್ಮು-ಕಾಶ್ಮೀರ, ಕರ್ನಾಟಕ, ಕೇರಳ, ತೆಲಂಗಾಣ, ತ್ರಿಪುರ ಮತ್ತು ಉತ್ತರಾಖಂಡ ರಾಜ್ಯಗಳು ಸೇರಿವೆ. ಸೇವಾ ದಾಖಲೆಯ ಸಕಾಲಿಕ ಪರಿಶೀಲನೆ ಭ್ರಷ್ಟಾಚಾರ ತಡೆಗಟ್ಟಲು ಹಾಗೂ ಆಡಳಿತದಲ್ಲಿ ನಿಷ್ಕ್ರಿಯತೆ ತೊಲಗಿಸಲು ನೆರವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೇಶದಾದ್ಯಂತ 5,104 ಐಎಎಸ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಸಿಬ್ಬಂದಿ ಸಚಿವಾಲಯದ ಮಾಹಿತಿ ತಿಳಿಸಿದೆ.







