ಪಾನ್ವರ್‌ಗೆ 10 ಮೀ. ಏರ್ ರೈಫಲ್‌ನಲ್ಲಿ ಬೆಳ್ಳಿ
ಐಎಸ್‌ಎಸ್‌ಎಫ್ ವಿಶ್ವಕಪ್

2020ರ ಒಲಿಂಪಿಕ್ ಕೋಟಾ ಸುರಕ್ಷಿತ
ಬೀಜಿಂಗ್, ಎ.26: ಭಾರತದ ದಿವ್ಯಾಂಶ್‌ಸಿಂಗ್ ಪಾನ್ವರ್ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಎರಡನೇ ಪದಕವನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಅಲ್ಲದೆ 2020ರ ಟೋಕಿಯೊ ಒಲಿಂಪಿಕ್ಸ್ ಗೂ ಕೋಟಾ ಸ್ಥಾನವನ್ನು ಉಳಿಸಿ ಕೊಂಡಿದ್ದಾರೆ.
ಶುಕ್ರವಾರ ಪಾನ್ವರ್ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ 249 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರೆ, ಚೀನಾದ ಝಿಚೆಂಗ್ ಹುಯ್ 249.4 ಅಂಕಗಳೊಂದಿಗೆ ಚಿನ್ನಕ್ಕೆ ಮುತ್ತಿಟ್ಟರು. ಅರ್ಹತಾ ಸುತ್ತಿನಲ್ಲಿ ಪಾನ್ವರ್ 629.2 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದರು.
ಗುರುವಾರ ಪಾನ್ವರ್ ಇದೇ ವಿಭಾಗದ ಮಿಶ್ರ ತಂಡದಲ್ಲಿ ಅಂಜುಮ್ ವೌದ್ಗಿಲ್ ಜೊತೆಯಾಗಿ ಚಿನ್ನದ ಪದಕ ಬಾಚಿಕೊಂಡಿದ್ದರು.
ಶುಕ್ರವಾರ ಬೆಳಗ್ಗೆ ನಡೆದ 25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಯಾವುದೇ ಭಾರತೀಯ ಸ್ಪರ್ಧಿಗಳು ಅರ್ಹತೆ ಗಳಿಸುವಲ್ಲಿ ವಿಫಲವಾದರು. ಈ ವಿಭಾಗದಲ್ಲಿ ಸ್ಪರ್ಧಿಸಿದ್ದ ದೇಶದ ಆದರ್ಶ್ 583 ಅಂಕಗಳೊಂದಿಗೆ 10ನೇ ಸ್ಥಾನ ಪಡೆದರೆ, ಅನೀಶ್ ಭನ್ವಾಲಾ 578 ಅಂಕಗಳೊಂದಿಗೆ 22ನೇ ಸ್ಥಾನ ಪಡೆದು ನಿರಾಸೆ ಮೂಡಿಸಿದರು. ಅರ್ಪಿತ್ 575 ಅಂಕಗಳೊಂದಿಗೆ 29ನೇ ಸ್ಥಾನ ಗಳಿಸಿದರು.







