ಮೀಸಲು ಅರಣ್ಯದಲ್ಲಿ ಕಡವೆ ಬೇಟೆ: ಆರು ಮಂದಿಯ ಬಂಧನ

ಮಡಿಕೇರಿ ಎ.27: ಕೊಡಗು, ಕೇರಳ ಗಡಿಯ ಕುಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಕಡವೆ ಬೇಟೆಯಾಡಿದ ಆರು ಮಂದಿ ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.
ಪೊನ್ನಂಪೇಟೆಯ ಮಾಪಿಳ್ಳೆ ತೋಡು ನಿವಾಸಿಗಳಾದ ಕೆ.ಬಿ.ಸಿದ್ದೀಕ್, ಎಂ.ಎಚ್.ಸಮೀರ್, ಎ.ಯು.ಸಮೀರ್, ನಾಪೋಕ್ಲುವಿನ ಕುಂಜಿಲ ಗ್ರಾಮದ ಕೆ.ಇ.ಇಸ್ಮಾಯಿಲ್, ಕೆ.ಎ.ಯೂಸುಫ್ ಹಾಗೂ ಕೆ.ಎ.ಮುಹಮ್ಮದ್ ಬಂಧಿತ ಆರೋಪಿಗಳು.
ಖಚಿತ ಮಾಹಿತಿಯನ್ನು ಆಧರಿಸಿ ಕೊಡಗು ಜಿಲ್ಲೆಯ ಕೇರಳ ಗಡಿಭಾಗ ಕುಟ್ಟ-ಇರ್ಪು ಜಂಕ್ಷನ್‌ನಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ವಾಹನ ಸಹಿತ ಕಡವೆ ಮಾಂಸ, ಬೇಟೆಗೆ ಬಳಸಿದ ಆಯುಧಗಳೊಂದಿಗೆ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಒಂಟಿ ನಳಿಕೆಯ ಒಂದು ಬಂದೂಕು, ಇನ್ನಿತರ ಆಯುಧಗಳು, ಸುಮಾರು 150 ಕೆ.ಜಿ. ಕಡವೆ ಮಾಂಸ, ಒಂದು ಕಾರು ಹಾಗೂ ಗೂಡ್ಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಮಾರ್ಗದರ್ಶನದಲ್ಲಿ ಡಿಸಿಐಬಿ ಇನ್‌ಸ್ಪೆಕ್ಟರ್ ಕೆ.ನಾಗೇಶ್, ಸಿಬ್ಬಂದಿ ಕೆ.ಎಸ್.ಅನಿಲ್‌ಕುಮಾರ್, ಬಿ.ಎಲ್.ಯೋಗೇಶ್ ಕುಮಾರ್, ಕೆ.ಆರ್.ವಸಂತ, ಎಂ.ಎಂ.ನಿರಂಜನ್ ಹಾಗೂ ಚಾಲಕ ಕೆ.ಎಸ್.ಶಶಿಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಬೇಟೆಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ತಂಡಕ್ಕೆ ವರಿಷ್ಠಾಧಿಕಾರಿ ಇದೇ ಸಂದರ್ಭ 10 ಸಾವಿರ ರೂ. ನಗದು ಬಹುಮಾನ ಘೋಷಿಸಿದ್ದಾರೆ.








